ಪುತ್ತೂರು: ದ.ಕ.ಜಿಲ್ಲಾ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಸರ್ವ ಸದಸ್ಯರುಗಳ ಪ್ರಥಮ ಮಹಾ ಅಧಿವೇಶನ ಹಾಗೂ ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ ಜೂ.1 ಭಾನುವಾರ ಪುತ್ತೂರಿನ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಮಾತೃ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಕೆ. ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ 2024 ರ ಆಗಸ್ಟ್ ನಲ್ಲಿ ನೋಂದಾವಣೆಗೊಂಡು ಅಸ್ತಿತ್ವಕ್ಕೆ ಬಂದಿದೆ. ನೋಂದಾವಣೆಗೊಂಡು ಒಂದು ವರ್ಷದ ಹೊತ್ತಿಗೆ ಸರ್ವ ಸದಸ್ಯರ ಮಹಾ ಅಧಿವೇಶನ ನಡೆಸಬೇಕೆಂದು ತೀರ್ಮಾನಿಸಲಾಗಿದ್ದು, ಅದರಂತೆ ಜೂ.1 ರಂದು ನಡೆಯಲಿದೆ. ಪ್ರಸ್ತುತ ಸುಮಾರು ಎರಡು ಸಾವಿರ ಸದಸ್ಯರ ನೊಂದಾವಣೆಯಾಗಿದ್ದು, ಮುಂದೆ 10 ಸಾವಿರ ಸದಸ್ಯರ ಸಂಖ್ಯೆಯ ನೋಂದಾವಣೆಯ ಗುರಿ ಹೊಂದಲಾಗಿದೆ ಎಂದು ತಿಳಿಸಿದ ಅವರು, ಸಂಘದ ಮುಖ್ಯ ಕಚೇರಿ ಮಂಗಳೂರಿನ ಚಿಲಿಂಬಿಯಲ್ಲಿರುವ ಒಕ್ಕಲಿಗ ಗೌಡರ ಭವನದಲ್ಲಿದ್ದು, ಸಂಘಕ್ಕೆ ವಿವಿಧ ಅಜೀವ ಪೋಷಕ ಮತ್ತು ಮಹಾಪೋಷಕ ಸದಸ್ಯರನ್ನು ನೋಂದಾಯಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಗೌಡ ಒಕ್ಕಲಿಗ ಸಮಾಜದ ಆಚಾರ, ವಿಚಾರ, ಸಂಸ್ಕೃತಿಗಳ ಅಡಿಯಲ್ಲಿ ಸ್ಥಾಪನೆಗೊಂಡು ಸಂಘಕ್ಕೆ ಒಪ್ಪಿಕೊಂಡು ಬರುವ ಸಮುದಾಯದವರಿಗೆ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಸದಸ್ಯತನ ನೀಡಲಾಗುತ್ತದೆ ಎಂದು ತಿಳಿಸಿದರು.
ಜೂ.1 ಭಾನುವಾರ ನಡೆಯುವ ಮಹಾ ಅಧಿವೇಶನವನ್ನು ಬೆಂಗಳೂರು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಉದ್ಘಾಟಿಸಲಿದ್ದು, ದ.ಕ.ಜಿಲ್ಲಾ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಕೆ. ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ಬೆಳ್ತಂಗಡಿ ಒಕ್ಕಲಿಗರ ಯಾನೆ ಗೌಡ ಸೇವಾ ಸಂಘದ ಅಧ್ಯಕ್ಷ ಪೂವಾಜೆ ಕುಶಾಲಪ್ಪ ಗೌಡ, ಬಂಟ್ವಾಳ ಒಕ್ಕಲಿಗರ ಯಾನೆ ಗೌಡ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ, ಮಂಗಳೂರು ಒಕ್ಕಲಿಗರ ಯಾನೆ ಗೌಡ ಸೇವಾ ಸಂಘದ ಅಧ್ಯಕ್ಷ ಸೌಮ್ಯ ಸುಕುಮಾರ್, ಪುತ್ತೂರು ಒಕ್ಕಲಿಗರ ಯಾನೆ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಹಾಗೂ ಕಡಬ ಒಕ್ಕಲಿಗರ ಯಾನೆ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಗೌರವ ಉಪಸ್ಥಿತರಿರುವರು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದ.ಕ.ಜಿಲ್ಲಾ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಕೋಶಾಧಿಕಾರಿ ಹೆಚ್.ಪದ್ಮ ಗೌಡ ಬೆಳ್ತಂಗಡಿ, ಕಾರ್ಯದರ್ಶಿ ರಾಮಣ್ಣ ಗೌಡ ಕೊಂಡೆಬಾಯಿ, ಉಪಾಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ, ರಾಮದಾಸ್ ಗೌಡ ಎಸ್. ಉಪಸ್ಥಿತರಿದ್ದರು.