ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು
ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಮತ್ತೊಬ್ಬ ಭಯೋತ್ಪಾದಕನನ್ನು ಬೇಟೆಯಾಡಲಾಗಿದೆ. ಲಷ್ಕರ್ ಇ ತೈಬಾ ಉಗ್ರ ಸಂಘಟನೆಯ ಮುಖಂಡ ಹಾಫಿದ್ ಸಯೀದ್‌ನ ಅತ್ಯಾಪ್ತ ಎನ್ನಲಾಗಿರುವ ಆಮಿರ್ ಹಮ್ಜಾ ಎಂಬಾತ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ಆದರೆಎ ಪಾಕಿಸ್ಥಾನದ ಮಾಧ್ಯಮಗಳು ಈತ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದಾನೆ ಎಂದು ವರದಿ ಮಾಡಿವೆ.
ಪ್ರಾಥಮಿಕ ಮಾಹಿತಿ ಪ್ರಕಾರ ಲಾಹೋರ್ನಲ್ಲಿ ಅಪರಿಚಿತರು ಹಮ್ಜಾನ ಮೇಲೆ ದಾಳಿ ನಡೆಸಿದ್ದಾರೆ. ಆಮಿರ್ ಹಮ್ಜಾ ಲಷ್ಕರ್-ಎ-ತೈಬಾ ಸ್ಥಾಪಕರಲ್ಲಿ ಒಬ್ಬ. ಆತನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ. ಸೈಫುಲ್ಲಾ ನಂತರ ಪಾಕಿಸ್ಥಾನದಲ್ಲಿ ಅಪರಿಚಿತರು ಬೇಟೆಯಾಡಿದ ಪ್ರಮುಖ ಉಗ್ರ ಈತ.
ಸಿಂಧ್ನಲ್ಲಿ ಸೈಫುಲ್ಲಾನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದಕ್ಕೂ ಮುನ್ನ ಭಾನುವಾರ ಪಾಕಿಸ್ಥಾನದ ಸಿಂಧ್ನಲ್ಲಿರುವ ಅಬು ಸೈಫುಲ್ಲಾ ಖಾಲಿದ್ ಮೇಲೆ ಅಪರಿಚಿತ ಬಂಧೂಕುಧಾರಿಗಳು ದಾಳಿ ನಡೆಸಿದ್ದರು. ಇದರಲ್ಲಿ ಆತ ಸಾವನ್ನಪ್ಪಿದ್ದ. ರಝಾವುಲ್ಲಾ ನಿಜಾಮಾನಿ ಖಾಲಿದ್ ಎಂದೂ ಆತನನ್ನು ಕರೆಯಲಾಗುತ್ತಿತ್ತು. ಲಷ್ಕರ್ ಸಂಘಟನೆಯ ಪ್ರಮುಖ ಭಯೋತ್ಪಾದಕ ಆತ. ಆತ 2000ರಿಂದಲೂ ನೇಪಾಳದಲ್ಲಿದ್ದುಕೊಂಡು ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದ, ಭಾರತ-ನೇಪಾಲ ಗಡಿಯಲ್ಲಿ ಭಯೋತ್ಪಾದಕರ ನೇಮಕಾತಿ, ಹಣ,ಲಾಜಿಸ್ಟಿಕ್ಸ್ ನಿರ್ವಹಿಸುತ್ತಿದ್ದ.
26/11 ಮುಂಬಯಿ ದಾಳಿಯ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಕೂಡ ಹಮ್ಜಾ. ಆತನ ಹಣೆ, ಮೂಗಿನಿಂದ ತೀವ್ರ ರಕ್ತಸ್ರಾವವಾಗುತ್ತಿದೆ, ಆತನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಹಫೀಜ್ ಮತ್ತು ಇತರರು ಹಮ್ಜಾನನ್ನು ಕೇಳದೆ ಯಾವುದೇ ಕೆಲಸ ಮಾಡುತ್ತಿರಲಿಲ್ಲ ಎಂದು ಹೇಳಲಾಗುತ್ತದೆ. ಹಮ್ಜಾ ಲಷ್ಕರೆ ಸಂಘಟನೆಯ ಜಮಾತ್ ಉದ್ ದಾವಾದ ಮುಖ್ಯಸ್ಥನಾಗಿದ್ದ. 2012 ರಲ್ಲಿ ಅಮೆರಿಕ ಆತನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಿತ್ತು.
2018ರಲ್ಲಿ ಲಷ್ಕರ್‌ಗಾಗಿ ಸಂಗ್ರಹಿಸಿದ ನಿಧಿಯ ಬಗ್ಗೆ ಅಮೀರ್ ಹಮ್ಜಾ ಮತ್ತು ಹಫೀಜ್ ಸಯೀದ್ ನಡುವೆ ಬಿರುಕು ಉಂಟಾಗಿತ್ತು. ಅದಾದ ನಂತರ ಹಮ್ಜಾ ಜೈಶ್ ಇ ಮಂಕಫಾ ಎಂಬ ಪ್ರತ್ಯೇಕ ಸಂಘಟನೆಯನ್ನು ಸ್ಥಾಪಿಸಿ ನಿಧಿ ಸಂಗ್ರಹಿಸಲು ಶುರು ಮಾಡಿದ್ದ. ಹಫೀಜ್‌ನಿಂದ ದೂರವಿರುವುದರಿಂದ, ಹಮ್ಜಾ ಕಳೆದ ಕೆಲವು ವರ್ಷಗಳಿಂದ ಸಕ್ರಿಯ ಕಾರ್ಯಾಚರಣೆಗಳಲ್ಲಿ ಭಾಗವಹಿಸುತ್ತಿರಲಿಲ್ಲ, ಆದರೆ ಅವನು ಭಯೋತ್ಪಾದಕರ ಬ್ರೈನ್‌ವಾಶ್ ಮಾಡುವುದನ್ನು ಮುಂದುವರಿಸಿದ್ದ.