ಜಗತ್ತಿಗೆ ಮತ್ತೆ ಕೋವಿಡ್‌ ಕಂಟಕ : ಏಷ್ಯಾದಲ್ಲಿ ಹರಡುತ್ತಿದೆ ಹೊಸ ರೂಪಾಂತರಿತ ವೈರಸ್‌

ಸಿಂಗಾಪುರ, ಹಾಂಕಾಂಗ್‌ನಲ್ಲಿ ಹೈಅಲರ್ಟ್‌ ಘೋಷಣೆ; ಭಾರತದಲ್ಲೂ ಕೆಲವು ಪ್ರಕರಣಗಳು ಪತ್ತೆ

ನವದೆಹಲಿ: 2019ರಲ್ಲಿ ಜಗತ್ತಿಗೆ ಅಪ್ಪಳಿಸಿದ ಕೋವಿಡ್‌ ಸಾಂಕ್ರಾಮಿಕ ರೋಗ ಇನ್ನೂ ಸಂಪೂರ್ಣವಾಗಿ ನಿರ್ಮೂಲನವಾಗಿಲ್ಲ. 3 ವರ್ಷ ಜಗತ್ತನ್ನು ಇನ್ನಿಲ್ಲದಂತೆ ಕಾಡಿದ್ದ ಕೋವಿಡ್ ಮತ್ತೊಮ್ಮೆ ಏಷ್ಯಾದ ಕೆಲವು ಭಾಗಗಳಲ್ಲಿ ವೇಗವಾಗಿ ಹರಡುತ್ತಿದ್ದು, ಪ್ರಕರಣಗಳ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದೆ. ಹಾಂಕಾಂಗ್‌ ಮತ್ತು ಸಿಂಗಾಪುರದಂತಹ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಅಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳು ಇದು ಹೊಸ ಅಲೆ ಎಂದು ದೃಢಪಡಿಸಿದ್ದಾರೆ. ಭಾರತದಲ್ಲೂ ಕೆಲವು ಕೋವಿಡ್‌ ಪ್ರಕರಣಗಳು ವರದಿಯಾಗಿವೆ.

ಈ ಸಲ ಕಾಣಿಸಿಕೊಂಡಿರುವ ಕೋವಿಡ್‌ ಸೋಂಕನ್ನು JN.1 ವೈರಸ್ ಎಂದು ಗುರುತಿಸಲಾಗಿದೆ. ಇದು ರೂಪಾಂತರಿತ ಕೋವಿಡ್ ವೈರಸ್ ಎಂದು ತಜ್ಞರು ಹೇಳಿದ್ದಾರೆ. JN.1 ವೈರಸ್ ಏಷ್ಯಾದ ಕೆಲ ರಾಷ್ಟ್ರಗಳಲ್ಲಿ ಆತಂಕ ಉಂಟುಮಾಡಿದೆ.



















































 
 

ಭಾರತದಲ್ಲೂ 257 ಪ್ರಕರಣಗಳು ಹಾಗೂ ಕರ್ನಾಟಕದಲ್ಲಿ 8 ಕೇಸ್ ಪತ್ತೆಯಾಗಿದ್ದು, ಕೇರಳದಲ್ಲಿ 69, ಮಹಾರಾಷ್ಟ್ರ 44, ತಮಿಳುನಾಡು 34, ಗುಜರಾತ್, ದೆಹಲಿ, ಹರ್ಯಾಣ, ರಾಜಸ್ಥಾನ, ಸಿಕ್ಕಿಂನಲ್ಲೂ ಪಾಸಿಟಿವ್ ಕೇಸ್‌ಗಳಿವೆ. ಸದ್ಯ ಯಾವುದೇ ರೀತಿಯ ಗಂಭೀರವಾದ ಗುಣಲಕ್ಷಣಗಳು ಕಾಣಿಸಿಕೊಂಡಿಲ್ಲ. ಹೀಗಾಗಿ ಆತಂಕದ ಸ್ಥಿತಿ ನಿರ್ಮಾಣವಾಗಿಲ್ಲ. ಆದರೆ ನಿರ್ಲಕ್ಷ್ಯ ಬೇಡ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಎಲ್ಲ ಕಡೆ ಸಂದೇಶ ರವಾನಿಸಿದ್ದು, ಕಟ್ಟೆಚ್ಚರ ವಹಿಸಿದೆ.

ಈಗಾಗಲೇ ಸಿಂಗಾಪುರ ಮತ್ತು ಹಾಂಗ್‌ಕಾಂಗ್‌ನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಮೇ 3ರಿಂದ ಮೆ 16ರ ವರೆಗೆ 14,200 ಕೇಸ್ ದಾಖಲಾಗಿದೆ ಎಂದು ಸಿಂಗಾಪುರ ಆರೋಗ್ಯ ಸಚಿವಾಲಯ ತಿಳಿಸಿದೆ. ಹಾಂಕಾಂಗ್, ಥಾಯ್ಲೆಂಡ್, ಸಿಂಗಾಪುರ, ಚೀನಾ ಸೇರಿದಂತೆ ಏಷ್ಯಾದ ಕೆಲ ರಾಷ್ಟ್ರಗಳಲ್ಲಿ ಕೋವಿಡ್ ಸ್ಫೋಟಗೊಂಡಿದೆ. ಪ್ರತಿ ದಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಆತಂಕದ ಬೆನ್ನಲ್ಲೇ ಕ್ರಿಕೆಟರ್‌ ಟ್ರಾವಿಸ್‌ ಹೆಡ್‌ ಹಾಗೂ 18ನೇ ಆವೃತ್ತಿ ಬಿಗ್ ಬಾಸ್ ಖ್ಯಾತಿಯ ಶಿಲ್ಪಾ ಶಿರೋಡ್ಕರ್‌ ಒಳಗೊಂಡಂತೆ ಅನೇಕರಲ್ಲಿ ಕೋವಿಡ್ ವೈರಸ್ ಕಾಣಿಸಿಕೊಂಡಿದೆ.

ಕಳೆದ ಕೆಲವು ವಾರಗಳಲ್ಲಿ ಸಿಂಗಾಪುರ ಮತ್ತು ಹಾಂಗ್ ಕಾಂಗ್‌ನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ನಂತರ ಭಾರತವು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಭಾರತದಲ್ಲಿರುವ ಬಹುತೇಕ ಪ್ರಕರಣಗಳು ಸೌಮ್ಯವಾಗಿವೆ, ತೀವ್ರವಾಗುವ ಲಕ್ಷಣ ಗೋಚರಿಸಿಲ್ಲ. ಈ ಎಲ್ಲ ಪ್ರಕರಣಗಳು ಸೌಮ್ಯವಾಗಿದ್ದು, ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್‌ನ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕು ದೃಢವಾಗಿದ್ದರಿಂದ ಅವರು ಸೋಮವಾರ ಲಖನೌದಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಆಡಿರಲಿಲ್ಲ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top