ಮುಂಗಾರು ಪೂರ್ವ ಮಳೆಯ ಅಬ್ಬರದ ಜೊತೆಗೆ ಮಳೆಗಾಲವೂ ಶುರು
ನವದೆಹಲಿ : ರಾಜ್ಯದಲ್ಲಿ ಮುಂಗಾರುಪೂರ್ವ ಮಳೆ ಅಬ್ಬರಿಸುತ್ತಿರುವಂತೆಯೇ ಹವಾಮಾನ ಇಲಾಖೆ ಈ ಸಲ ಮುಂಗಾರು ಪ್ರವೇಶ ಕೂಡ ಅವಧಿಗಿಂತ ಮುಂಚೆ ಆಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ನೈಋತ್ಯ ಮಾನ್ಸೂನ್ ಮುಂದಿನ 4ರಿಂದ 5 ದಿನಗಳಲ್ಲಿ ಕೇರಳಕ್ಕೆ ಆಗಮಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಪ್ರತಿ ವರ್ಷ ಜೂನ್ ತಿಂಗಳ ಆರಂಭದಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶವಾಗುತ್ತಿತ್ತು. ಆದರೆ ಈ ವರ್ಷ ಬಹಳ ಮುಂಚೆಯೇ ಬರಬಹುದು ಎಂದು ಭವಿಷ್ಯ ನುಡಿದಿದೆ.
ಐಎಂಡಿ ಈ ಹಿಂದೆ ಮೇ 27ರ ವೇಳೆಗೆ ಮಾನ್ಸೂನ್ ಕೇರಳವನ್ನು ತಲುಪುತ್ತದೆ ಎಂದು ನಿರೀಕ್ಷಿಸಿತ್ತು. ಆದರೆ, ಅದಕ್ಕೂ 2-3 ದಿನಗಳು ಮುಂಚಿತವಾಗಿಯೇ ಮಾನ್ಸೂನ್ ಆಗಮನವಾಗುವ ಸಾಧ್ಯತೆಯಿದೆ. ಮುಂಚಿತವಾಗಿ ಮಳೆಯಾಗುವುದರಿಂದ ಬಿಸಿಲಿನ ಬೇಗೆ ಕಡಿಮೆಯಾಗುವುದಲ್ಲದೆ, ಭತ್ತ, ಜೋಳ, ಹತ್ತಿ, ಸೋಯಾಬೀನ್ ಮತ್ತು ಇತರ ಎಣ್ಣೆಬೀಜಗಳಂತಹ ಬಂಪರ್ ಬೆಳೆಗಳ ಬಿತ್ತನೆಯೂ ಹೆಚ್ಚಾಗುತ್ತದೆ.
ಪ್ರಸ್ತುತ ಇರುವ ವೇಗದಲ್ಲಿಯೇ ಮಳೆ ಮುಂದುವರಿದರೆ ಮತ್ತು ಇತರ ಪರಿಸ್ಥಿತಿಗಳು ಅನುಕೂಲಕರವಾಗಿದ್ದರೆ ಮುಂದಿನ 4-5 ದಿನಗಳಲ್ಲಿ ಕೇರಳದಲ್ಲಿ ಮಾನ್ಸೂನ್ ಆರಂಭವಾಗುವ ಸಾಧ್ಯತೆಯಿದೆ ಎಂದು ಐಎಂಡಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ವರ್ಷ ಮಾನ್ಸೂನ್ ಮೇ 30ರಂದು ಕೇರಳದ ಕರಾವಳಿಯನ್ನು ತಲುಪಿತ್ತು.
ನೈಋತ್ಯ ಮಾನ್ಸೂನ್ ಭಾರತದ ಕೃಷಿ ಆರ್ಥಿಕತೆಗೆ ಅತ್ಯಗತ್ಯವಾಗಿದೆ. ಭಾರತ ಕೃಷಿಗೆ ಶೇ.70ರಷ್ಟು ನೀರನ್ನು ಮುಂಗಾರು ಮಳೆಯಿಂದಲೇ ಪಡೆದುಕೊಳ್ಳುತ್ತಿದೆ. ಆದರೆ ಈ ವರ್ಷ ಕರಾವಳಿ ಸೇರಿದಂತೆ ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಜೋರಾಗಿರುವುದರಿಂದ ಕೃಷಿ ಚಟುವಟಿಕೆಗಳು ಬೇಗನೆ ಶುರುವಾಗಲಿವೆ.
ಮೇ 13ರಂದು ದಕ್ಷಿಣ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ದಕ್ಷಿಣ ಅಂಡಮಾನ್ ಸಮುದ್ರ, ನಿಕೋಬಾರ್ ದ್ವೀಪಗಳು ಮತ್ತು ಉತ್ತರ ಅಂಡಮಾನ್ ಸಮುದ್ರದ ಕೆಲವು ಭಾಗಗಳಿಗೆ ಮಾನ್ಸೂನ್ ನಿಗದಿತ ಸಮಯಕ್ಕಿಂತ 2 ದಿನ ಮುಂಚಿತವಾಗಿ ಪ್ರವೇಶಿಸಿತ್ತು. ದಕ್ಷಿಣ ಅರೇಬಿಯನ್ ಸಮುದ್ರ, ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶದ ಹೆಚ್ಚಿನ ಭಾಗಗಳು ಅದರಲ್ಲೂ ಲಕ್ಷದ್ವೀಪದ ಕೆಲವು ಭಾಗಗಳು, ಕೇರಳ, ತಮಿಳುನಾಡು, ಕರ್ನಾಟಕ, ದಕ್ಷಿಣ ಮತ್ತು ಮಧ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ಈಶಾನ್ಯ ಬಂಗಾಳ ಕೊಲ್ಲಿಯ ಮತ್ತು ಈಶಾನ್ಯ ರಾಜ್ಯಗಳ ಕೆಲವು ಭಾಗಗಳಲ್ಲಿ ನೈಋತ್ಯ ಮಾನ್ಸೂನ್ ಮತ್ತಷ್ಟು ಮುನ್ನಡೆಯಲು ಪರಿಸ್ಥಿತಿಗಳು ಅನುಕೂಲಕರವಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.
ಈ ವರ್ಷ ದೇಶಾದ್ಯಂತ ನೈಋತ್ಯ ಮಾನ್ಸೂನ್ ಋತುಮಾನದ ಮಳೆ ಸಾಮಾನ್ಯಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ. ಮೇ 22ರವರೆಗೆ ಕರ್ನಾಟಕದ ಕರಾವಳಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ಉಂಟಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳು ರೆಡ್ ಅಲರ್ಟ್‌ನಲ್ಲಿವೆ. ಕೇರಳ, ತಮಿಳುನಾಡು, ಪುದುಚೇರಿ, ಕಾರೈಕಲ್, ಕೊಂಕಣ, ಗೋವಾ, ಮಧ್ಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರದಲ್ಲಿ ಮೇ 24ರವರೆಗೆ ಭಾರೀ ಮಳೆಯಾಗುವ ಬಗ್ಗೆ ಐಎಂಡಿ ಎಚ್ಚರಿಕೆ ನೀಡಿದೆ.
ಕರ್ನಾಟಕದಾದ್ಯಂತ ಮುಂಗಾರು ಪೂರ್ವ ಮಳೆಯ ಅಬ್ಬರ ಜೋರಾಗಿದೆ. ಅರಬ್ಬಿ ಸಮುದ್ರದಲ್ಲಾದ ವಾಯುಭಾರ ಕುಸಿತದಿಂದಾಗಿ ರಾಜ್ಯದ ಬಹುತೇಕ ಕಡೆ ವರುಣನ ಆರ್ಭಟ ಹೆಚ್ಚಾಗಿದೆ. ಬುಧವಾರ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಧಾರಾಕಾರ ಮಳೆಯಾಗಲಿದೆ.