ಮಂಗಳೂರು: ನಗರ ಹೊರವಲಯದ ಕುಡುಪು ಗ್ರಾಮದ ಪಾಲ್ದನೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಪಲ್ಲವಿ ಎಂಬ ಮಹಿಳೆಯ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಮನೆಯ ಕೊಠಡಿಯಲ್ಲಿ ಪತ್ತೆಯಾಗಿದೆ.
ಪಲ್ಲವಿಯ ಪತಿ ನವೀನ್ ಹಾಗೂ ಅತ್ತೆ ಶಾಂತಾ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ದೂರಲಾಗಿದೆ. ಭಾನುವಾರ ಶವ ಪತ್ತೆಯಾಗಿದ್ದು, ಘಟನೆಯ ಬಳಿಕ ನವೀನ್ ತಲೆಮರೆಸಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಲ್ದನೆಯ ಕರುಣಾಕರ ಶೆಟ್ಟಿಯ ಮನೆಯ ಮಹಡಿಯಲ್ಲಿ ನವೀನ್ ಕುಟುಂಬ 3 ತಿಂಗಳಿಂದ ಬಾಡಿಗೆಗೆ ವಾಸವಾಗಿತ್ತು. ನವೀನ್ ನಿತ್ಯವೂ ಪಾನಮತ್ತನಾಗಿ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ.
ಮನೆಯ ಹಾಲ್‌ನಲ್ಲಿ ಹಾಸಿಗೆಯ ಮೇಲೆ ಅಂಗಾತ ಮಲಗಿದ ಸ್ಥಿತಿಯಲ್ಲಿ ಪಲ್ಲವಿಯ ಮೃತದೇಹ ರವಿವಾರ ಪತ್ತೆಯಾಗಿದೆ. ಎರಡು ಕಣ್ಣುಗಳ ಬಳಿ ಗುದ್ದಿದ ಗಾಯವಿದ್ದು, ರಕ್ತ ಕಪ್ಪಾಗಿತ್ತು. ಕುತ್ತಿಗೆ ಮತ್ತು ಮುಖದಲ್ಲಿ ಅಲ್ಲಲ್ಲಿ ಪರಚಿದ ಗಾಯಗಳಿದ್ದವು. ಬಾಯಲ್ಲಿ ನೊರೆ ಬಂದಿತ್ತು ಎನ್ನಲಾಗಿದೆ. ಘಟನೆ ಬಳಿಕ ನವೀನ್ ಪರಾರಿಯಾಗಿದ್ದಾನೆ. ಆತನ ತಾಯಿಯ ಬಳಿ ವಿಚಾರಿಸಿದಾಗ, ತನಗೇನೂ ಗೊತ್ತಿಲ್ಲ ಎಂದು ಹೇಳಿ ತನ್ನ ಸೊಸೆಯ ಕೊಲೆಯನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.