ಸ್ಫೋಟಕಗಳನ್ನು ಸಂಗ್ರಹಿಸಿ ಬಾಂಬ್ ತಯಾರಿಸುತ್ತಿದ್ದ ಐಸಿಸ್ ಉಗ್ರರು
ಹೈದರಾಬಾದ್: ಹೈದರಾಬಾದ್ ನಗರದಲ್ಲಿ ಬಾಂಬ್ ಸ್ಫೋಟಿಸುವ ಸಂಚನ್ನು ವಿಫಲಗೊಳಿಸಿರುವ ಪೊಲೀಸರು ಈ ಸಂಬಂಧ ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ. ವಿಜಯನಗರಂನ ಸಿರಾಜ್ ಮತ್ತು ಹೈದರಾಬಾದ್ನ ಸಮೀರ್ ಸೆರೆಯಾಗಿರುವ ಉಗ್ರರು.
ಸೌದಿ ಅರೇಬಿಯದ ಐಸಿಸ್ ಉಗ್ರರ ಸಂಘಟನೆಯ ಸೂಚನೆಯ ಮೇರೆಗೆ ಇವರಿಬ್ಬರು ಹೈದರಾಬಾದ್ ನಗರದಲ್ಲಿ ಬಾಂಬ್ ಸ್ಫೋಟಿಸಲು ಯೋಜನೆ ಹಾಕಿಕೊಂಡಿದ್ದರು. ಹೈದರಾಬಾದ್ ಮತ್ತು ತೆಲಂಗಾಣ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅವರ ಸಂಚು ವಿಫಲಗೊಂಡಿದೆ. ಸಿರಾಜ್ ಸ್ಫೋಟಕಗಳನ್ನು ಸಂಗ್ರಹಿಸಿಟ್ಟುಕೊಂಡು ಬಾಂಬ್ ತಯಾರಿಸುವ ಸಿದ್ಧತೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಬ್ ಸ್ಫೋಟ ಸಂಚಿನ ಬಗ್ಗೆ ಖಚಿತ ಗುಪ್ತಚರ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಪಹಲ್ಗಾಮ್ ಹತ್ಯಾಕಾಂಡದ ಬಳಿಕ ಪೊಲೀಸರು ಮತ್ತು ಗುಪ್ತಚರ ಪಡೆ ಕಟ್ಟೆಚ್ಚರದಿಂದಿದೆ. ಕಳೆದ ಏಪ್ರಿಲ್ 22ರಂದು ಭಯೋತ್ಪಾದಕರು ಪಹಲ್ಗಾಮ್ನ ಬೈಸನ್ನಲ್ಲಿ ಅಮಾಯಕ ಪ್ರವಾಸಿಗರನ್ನು ಗುಂಡಿಕ್ಕಿ ಸಾಯಿಸಿದ ಬಳಿಕ ಭಾರತದ ವಾಯುಪಡೆ ಪಾಕಿಸ್ಥಾನಕ್ಕೆ ನುಗ್ಗಿ ಉಗ್ರರ ನೆಲೆಗಳನ್ನು ನಾಶ ಮಾಡಿದೆ. ಆ ಬಳಿಕ ದೇಶದಲ್ಲಿ ಉದ್ವಿಗ್ನ ಸ್ಥಿತಿಯಿದ್ದು, ಕಟ್ಟೆಚ್ಚರದ ಕಾವಲು ಇದೆ.
ಆಪರೇಷನ್ ಸಿಂದೂರ ಕಾರ್ಯಾಚರಣೆಯ ಬಳಿಕ ಉಗ್ರರ ಹಲವು ಸ್ಲೀಪರ್ ಸೆಲ್ಗಳು ಸಕ್ರಿಯಗೊಂಡಿವೆ. ದೇಶಾದ್ಯಂತ ಇಂಥ ಸ್ಲೀಪರ್ ಸೆಲ್ಗಳಿದ್ದು, ವಿಧ್ವಂಸಕ ಕೃತ್ಯ ನಡೆಸಲು ಹೊಂಚು ಹಾಕುತ್ತಿವೆ. ಹೈದರಾಬಾದ್ನಲ್ಲಿ ಸೆರೆಯಾದ ಇಬ್ಬರು ಸ್ಥಳೀಯ ಉಗ್ರರು ಕೂಡ ಐಸಿಸ್ನ ಸ್ಲೀಪರ್ ಸೆಲ್ ಸದಸ್ಯರು. ಅವರನ್ನು ಸೌದಿ ಅರೇಬಿಯದಿಂದ ನಿಯಂತ್ರಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.