ಪುತ್ತೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಪೊಲೀಸರು ಜಾಗೃತರಾಗಿದ್ದಾರೆ. ಅಪರಾಧ ಹಿನ್ನೆಲೆಯುಳ್ಳವರನ್ನು ಗುರುತಿಸಿ, ಅವರನ್ನು ಗಡಿಪಾರುಗೊಳಪಡಿಸುವ ಕೆಲಸ ನಡೆಯುತ್ತಿದೆ.
ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪ್ರತಿ ಚುನಾವಣೆ ಎದುರಾದಾಗಲೂ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಪೊಲೀಸ್ ವರಿಷ್ಠಾಧಿಕಾರಿಗಳ ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿ, ಗಡಿಪಾರಿಗೆ ಆದೇಶ ನೀಡುತ್ತಾರೆ.
ಈ ಬಾರಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಒಟ್ಟು 11 ಮಂದಿಯನ್ನು ಗಡಿಪಾರು ಮಾಡಲಾಗಿದೆ. ಇದರಲ್ಲಿ ಐವರು ಪುತ್ತೂರು ತಾಲೂಕಿನವರು.
ಮಾರ್ಚ್ 6ರಿಂದಲೇ ಗಡಿಪಾರು ಆದೇಶ ಜಾರಿಯಲ್ಲಿದ್ದು, ಮುಂದಿನ ಆರು ತಿಂಗಳು ಅಂದರೆ ಸೆಪ್ಟೆಂಬರ್ 6ರವರೆಗೆ ಈ ಗಡಿಪಾರು ಆದೇಶ ಜಾರಿಯಲ್ಲಿರುತ್ತದೆ. ಅಂದರೆ ಗಡಿಪಾರಿಗೆ ಒಳಗಾದ 11 ಮಂದಿ ಮುಂದಿನ ಆರು ತಿಂಗಳು ಜಿಲ್ಲೆಯನ್ನು ಪ್ರವೇಶಿಸುವಂತಿಲ್ಲ.
ಗಡಿಪಾರಿಗೊಳಗಾದವರ ವಿವರ ಹೀಗಿದೆ:
ಪುತ್ತೂರು ತಾಲೂಕಿನಿಂದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗನ್ನೂರು ಅನಿಲೆ ನಿವಾಸಿ ಜಯರಾಜ್ ರೈ (ಜಯರಾಜ್ ಶೆಟ್ಟಿ), 34ನೇ ನೆಕ್ಕಿಲಾಡಿಯ ಕರವೇಲು ನಿವಾಸಿ ಅಬೂಬಕ್ಕರ್ ಸಿದ್ದೀಕ್, ಉಪ್ಪಿನಂಗಡಿ ಸಿಪಿಸಿ ಕಂಪೌಂಡ್ ನಿವಾಸಿ ಉಬೈದ್ ಬಿ.ಎಸ್., ತಣ್ಣೀರುಪಂಥ ಬೋವುಮಜಲು ನಿವಾಸಿ ತಸ್ಲೀಮ್. ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನೆಹರೂನಗರ ನಿವಾಸಿ ಇಬ್ರಾಹಿಂ (ಇಬ್ಬಿ) ಹಾಗೂ ಕೂರ್ನಡ್ಕ ನಿವಾಸಿ ಹಕೀಂ ಕೂರ್ನಡ್ಕ.
ಬಂಟ್ವಾಳ ತಾಲೂಕಿನ ಬಂಟ್ವಾಳ ಗೋಳ್ತಮಜಲು ಮಾಣಿಮಜಲು ನಿವಾಸಿ ನಜೀರ್ ಕುಣಿಗಲ್ ಹಾಗೂ ಬಾಳ್ತಿಲ ಕುರ್ಮಾನು ನಿವಾಸಿ ಇಬ್ರಾಹಿಂ ಖಲೀಲ್.
ಕಡಬ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕುದ್ಮಾರು ಬರೆಪ್ಪಾಡಿ ನಿವಾಸಿ ರೋಷನ್, ಸವಣೂರು ಇಡ್ಯಾಡಿ ನಿವಾಸಿ ಪ್ರಸಾದ್.
ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮ ದೇವಸಕೊಳಕೆ ಬೈಲು ನಿವಾಸಿ ಕಿರಣ್ ಕುಮಾರ್ ಡಿ.