ಟರ್ಕಿ, ಚೀನ ನಿರ್ಮಿತ ಡ್ರೋನ್‌ಗಳೆಲ್ಲ ಆಕಾಶದಲ್ಲೇ ಉಡೀಸ್
ನವದೆಹಲಿ: ಆಪರೇಷನ್ ಸಿಂಧೂರ ಬಳಿಕ ಶುರುವಾದ ಯುದ್ಧದಲ್ಲಿ ಭಾರತದ ವಿರುದ್ಧ ಪಾಕಿಸ್ಥಾನ ಬರೋಬ್ಬರಿ 600 ಡ್ರೋನ್‌ಗಳಿಂದ ದಾಳಿ ನಡೆಸಿತ್ತು. ಸುಧಾರಿತ ರಕ್ಷಣಾ ವ್ಯವಸ್ಥೆಗಳನ್ನು ಬಳಸಿಕೊಂಡು ಭಾರತ ಎಲ್ಲ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಯುದ್ಧದ ಕೆಲವೊಂದು ಮಾಹಿತಿಗಳು ಈಗ ಬಹಿರಂಗವಾಗಿದ್ದು, ಪಾಕಿಸ್ಥಾನಕ್ಕೆ ಟರ್ಕಿ ಪೂರ್ಣ ನೆರವು ನೀಡಿದ್ದು ಜಗಜ್ಜಾಹೀರಾಗಿದೆ.
ಭಾರತದ ವಿರುದ್ಧ ಬರೋಬ್ಬರಿ 600 ಡ್ರೋನ್‌ಗಳಿಂದ ಪಾಕ್ ದಾಳಿ ಮಾಡಿತು. ಟರ್ಕಿ ನಿರ್ಮಿತ ಡ್ರೋನ್‌ಗಳಿಂದ ದಾಳಿಯಾಗಿತ್ತು. ಲೇಹ್‌ನಿಂದ ಸರ್ ಕ್ರೀಕ್‌ವರೆಗೆ 36 ಸ್ಥಳಗಳಲ್ಲಿ ಒಳನುಗ್ಗಲು ಯತ್ನಿಸಿತು. ಜಮ್ಮು, ಪಠಾಣ್‌ಕೋಟ್, ಉಧಾಮ್‌ಪುರ, ಶ್ರೀನಗರ, ಅವಂತಿಪುರ, ಅಮೃತಸರ, ಲುಧಿಯಾನ, ಚಂಡೀಗಢ, ಭಟಿಂಡಾ, ಭುಜ್, ಜೈಸಲ್ಮೇರ್ ಸೇನಾ ನೆಲೆಗಳ ಮೇಲೆ ದಾಳಿಗೆ ಪ್ರಯತ್ನ ಮಾಡಿತ್ತು. ಪಾಕ್‌ನ ಎಲ್ಲ ಡ್ರೋನ್‌ಗಳನ್ನು ಭಾರತ ಹೊಡೆದುರುಳಿಸಿತು. 1,000 ಗನ್ ಸಿಸ್ಟಮ್ ಮತ್ತು 750 ಕ್ಷಿಪಣಿಗಳನ್ನು ಬಳಸಿಕೊಂಡು ಭಾರತ ದಾಳಿಯನ್ನು ಹಿಮ್ಮೆಟ್ಟಿಸಿತು. S-400 ಸುದರ್ಶನ ಚಕ್ರ ಮತ್ತು D4 ಆಂಟಿ-ಡ್ರೋನ್ ವ್ಯವಸ್ಥೆಯ ಬಳಕೆಯನ್ನೂ ಮಾಡಿದೆ.
ಪಾಕಿಸ್ಥಾನದ ದಾಳಿಯನ್ನು ಭಾರತೀಯ ಸೇನೆ ನಿರೀಕ್ಷಿಸಿತ್ತು. ಪೂರ್ವಸಿದ್ಧತಾ ಕಾರ್ಯವಾಗಿ, ಜಂಟಿ ವಾಯು ರಕ್ಷಣಾ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಅಲ್ಲಿ ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಯು ಡ್ರೋನ್ ದಾಳಿಯನ್ನು ಹಿಮ್ಮೆಟ್ಟಿಸಲು ಮತ್ತು ಪ್ರಮುಖ ಕಾರ್ಯತಂತ್ರದ ಸ್ವತ್ತುಗಳನ್ನು ರಕ್ಷಿಸಲು ಒಗ್ಗಟ್ಟಿನಿಂದ ಕೆಲಸ ಮಾಡಿದವು.