ಕಾಶ್ಮೀರ ಸಮಸ್ಯೆಯನ್ನೂ ಒಳಗೊಂಡು ಚರ್ಚೆಯ ಪ್ರಸ್ತಾಪ
ಇಸ್ಲಾಮಾಬಾದ್: ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೂಲಕ ಕೊಟ್ಟ ಹೊಡೆತಕ್ಕೆ ತತ್ತರಿಸಿ ಹೋಗಿರುವ ಪಾಕಿಸ್ಥಾನ ಈಗ ತಾನಾಗಿಯೇ ಮಾತುಕತೆಗೆ ಮುಂದೆ ಬಂದಿದೆ. ಪಾಕಿಸ್ಥಾನ ಶಾಂತಿಗಾಗಿ ತೊಡಗಿಸಿಕೊಳ್ಳಲು ಸಿದ್ಧವಾಗಿದೆ ಎಂದು ಅಲ್ಲಿನ ಪ್ರಧಾನಿ ಶೆಹಬಾಜ್ ಶರೀಫ್ ಭಾರತದ ಮುಂದೆ ಮಾತುಕತೆ ಪ್ರಸ್ತಾಪ ಇಟ್ಟಿದ್ದಾರೆ.
ಭಾರತದೊಂದಿಗಿನ ಮಿಲಿಟರಿ ಮುಖಾಮುಖಿಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ಮತ್ತು ಸೈನಿಕರೊಂದಿಗೆ ಸಂವಾದ ನಡೆಸಲು ಗುರುವಾರ ಪಂಜಾಬ್ ಪ್ರಾಂತ್ಯದ ಕಮ್ರಾ ವಾಯುನೆಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶೆಹಬಾಜ್ ಈ ಹೇಳಿಕೆ ನೀಡಿದ್ದಾರೆ.
ಶಾಂತಿಗಾಗಿ ನಾವು ಅದರೊಂದಿಗೆ (ಭಾರತ) ಮಾತುಕತೆಗೆ ಸಿದ್ಧರಿದ್ದೇವೆ. ಶಾಂತಿಗಾಗಿ ಷರತ್ತುಗಳು ಕಾಶ್ಮೀರ ಸಮಸ್ಯೆಯನ್ನೂ ಒಳಗೊಂಡಿವೆ ಎಂದು ಶೆಹಬಾಜ್ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಯಾವಾಗಲೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗಗಳಾಗಿರುತ್ತವೆ ಎಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ.
ಶೆಹಬಾಜ್ ಅವರೊಂದಿಗೆ ಉಪಪ್ರಧಾನಿ ಇಶಾಕ್ ದಾರ್, ರಕ್ಷಣಾ ಸಚಿವ ಖವಾಜಾ ಆಸಿಫ್, ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್, ವಾಯುಪಡೆಯ ಮುಖ್ಯಸ್ಥ, ವಾಯುಪಡೆ ಮುಖ್ಯಸ್ಥ ಮಾರ್ಷಲ್ ಜಹೀರ್ ಅಹ್ಮದ್ ಬಾಬರ್ ಸಿಧು ಕೂಡ ಗುರುವಾರ ವಾಯುನೆಲೆಗೆ ಹೋಗಿದ್ದರು.
ಪಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಭಾರತ ಸಿಂಧೂ ನದಿ ಜಲಹಂಚಿಕೆ ಒಪ್ಪಂದವನ್ನು ರದ್ದು ಮಾಡಿರುವುದು ಪಾಕಿಸ್ಥಾನಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈಗ ಭಾರತ ತನ್ನ ಇಷ್ಟಕ್ಕೆ ತಕ್ಕಂತೆ ಪಾಕ್‌ಗೆ ನೀರು ಬಿಡುವುದು, ನಿಲ್ಲಿಸುವುದು ಮಾಡುತ್ತಿರುವುದರಿಂದ ಅಲ್ಲಿನ ಜನ ಸಂಕಷ್ಟಕ್ಕೀಡಾಗಿದ್ದಾರೆ. ಭಾರತ ಪಾಕ್‌ಗೆ ಹರಿಯುವ ನೀರನ್ನು ತಡೆಯಲು ಅಣೆಕಟ್ಟೆ ಮತ್ತಿತರ ಸೌಲಭ್ಯಗಳ ನಿರ್ಮಾಣ ಮಾಡಿದರೆ ಅರ್ಧಕ್ಕರ್ಧ ಪಾಕಿಸ್ಥಾನ ತೀವ್ರ ಜಲಕ್ಷಾಮದಿಂದ ತತ್ತರಿಸಲಿದೆ. ಹೀಗಾಗಿ ಪಾಕಿಸ್ಥಾನ ತಾನಾಗಿಯೇ ಮಾತುಕತೆಗೆ ಮುಂದೆ ಬಂದಿದೆ.
ಆದರೆ ಭಾರತ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಭಯೋತ್ಪಾದಕರ ಹಸ್ತಾಂತರದ ಮೇಲೆ ಮಾತ್ರ ಮಾತುಕತೆ ನಡೆಯಲಿದೆ ಎಂದು ಈಗಾಗಲೇ ಸ್ಪಷ್ಟಪಡಿಸಿರುವುದರಿಂದ ಪಾಕಿಸ್ಥಾನದ ಈ ಕೊಡುಗೆ ಕುತೂಹಲ ಕೆರಳಿಸಿದೆ.