ಪುತ್ತೂರು: ಕಳೆದ ಏಪ್ರಿಲ್ ತಿಂಗಳಲ್ಲಿ ವನ್ಯಜೀವಿ ಬೇಟೆಯಾಡಿ, ಅದರ ಮಾಂಸವನ್ನು ದಾಸ್ತಾನಿರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗೆ ದ.ಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ನಿರೀಕ್ಷಣ ಜಾಮೀನು ಮಂಜೂರುಗೊಳಿಸಿ ಆದೇಶ ನೀಡಿದೆ.
ಏ.24 ರಂದು ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲೆಂಜಾಲು ಎಂಬಲ್ಲಿ ವಾಸವಿರುವ ವರ್ಗೀಸ್ ಥಾಮಸ್ ಎಂಬವರ ಮನೆಯಲ್ಲಿ ವನ್ಯ ಪ್ರಾಣಿಯ ಮಾಂಸದ ತುಂಡುಗಳನ್ನು ದಾಸ್ತಾನಿಟ್ಟಿರುವ ಕುರಿತು ಮಾಹಿತಿ ಬಂದಿದ್ದು, ಪಂಜ ವಲಯದ ಕಡಬ ಅರಣ್ಯಾಧಿಕಾರಿಗಳು ಆರೋಪಿ ಮನೆಗೆ ದಾಳಿ ನಡೆಸಿದಾಗ ಮನೆಯ ರೆಫ್ರಿಜರೇಟರ್ ಒಳಗಡೆ ಹಸಿ ಮಾಂಸ ಪತ್ತೆಯಾಗಿ ಬಳಿಕ ಆರೋಪಿ ಪರಾರಿಯಾಗಿರುವುದಾಗಿ ಆರೂಪಿಸಿ, ತದನಂತರ ಕೃತ್ಯಕ್ಕೆ ಉಪಯೋಗಿಸಿದೆ ಎನ್ನಲಾದ ಕೋವಿ, ವಾಹನವನ್ನು ಮತ್ತು ಹಸಿ ಮಾಂಸವನ್ನು ವಶಕ್ಕೆ ಪಡೆದುಕೊಂಡು, ಆರೋಪಿ ವರ್ಗಿಸ್ ಥಾಮಸ್ ವಿರುದ್ಧ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರನ್ವಯ ಮೊಕದ್ದಮೆ ದಾಖಲಿಸಿ, ಪುತ್ತೂರು ನ್ಯಾಯಾಲಯಕ್ಕೆ ಅರಣ್ಯ ಅಧಿಕಾರಿಗಳು ವರದಿಯನ್ನು ನೀಡಿದ್ದರು.
ಪ್ರಕರಣದ ಆರೋಪಿ ವರ್ಗೀಸ್ ಥಾಮಸ್ ರವರು, ತಾನು ನಿರಪರಾಧಿ, ಈ ಪ್ರಕರಣಕ್ಕೂ ಮತ್ತು ತನಗೆ ಯಾವುದೇ ಸಂಬಂಧವಿಲ್ಲ. ಆನೆ ಕಾರಿಡಾರ್ ನಿರ್ಮಿಸುವ ವಿಚಾರದಲ್ಲಿ ತನಗೂ ಮತ್ತು ತನ್ನ ರಾಜಕೀಯ ವೈರಿಗಳಿಗೂ ದ್ವೇಷವಿರುವುದರಿಂದ, ಈ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲಾಗಿದೆ ಎಂಬ ವಾದವನ್ನು ಮುಂದಿಟ್ಟು ತನ್ನ ವಕೀಲರ ಮೂಲಕ ರಕ್ಷಣೆಗಾಗಿ ಮಾನ್ಯ ನ್ಯಾಯಾಲಯದ ಮೊರೆ ಹೋಗಿದ್ದರು.
ಇದೀಗ ಈ ಪ್ರಕರಣದಲ್ಲಿ ದ.ಕ. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಪುತ್ತೂರು ಪೀಠದ ಗೌರವಾನ್ವಿತ ನ್ಯಾಯಾಧೀಶೆ ಸರಿತಾ ಡಿ ರವರು, ಆರೋಪಿಗೆ ಶರ್ತಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ. ಆರೋಪಿ ಹಿರಿಯ ನ್ಯಾಯವಾದಿಗಳಾದ ನೂರುದ್ದೀನ್ ಸಾಲ್ಮರ ಮತ್ತು ಸಾಕ್ಷಿಕ್ ಆರಿಗಾ ಬಿ.ವಾದಿಸಿದ್ದರು.