ಪುತ್ತೂರು: ಬಲ್ನಾಡು ಗ್ರಾಮದ ಉಜ್ರುಪಾದೆ ಕಾರಣಿಕದ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಮಾ.11 ರಂದು ಶ್ರೀ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಮೊಕ್ತೇಸರ ಕೆ. ಬಾಬು ಪೂಜಾರಿ ಬಲ್ನಾಡು ಹೇಳಿದರು.
ಬೆಳಿಗ್ಗೆ ಸ್ಥಳ ಶುದ್ಧಿ, ಗಣಹೋಮ, ಕಲಶಾಭಿಷೇಕ, ರಾತ್ರಿ 7ಕ್ಕೆ ಶ್ರೀ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ. ಉಜ್ರುಪಾದೆಯಲ್ಲಿ ಹಲವು ಶತಮಾತನಗಳಿಂದ ಆರಾಧಿಸಿಕೊಂಡು ಬರುತ್ತಿದ್ದ ಕಾರಣಿಕದ ಸ್ವಾಮಿ ಕೊರಗಜ್ಜ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ 2009 ಜುಲೈ 7,,೮ ರಂದು ನಡೆದಿದೆ. ಆ ಬಳಿಕ ಕ್ಷೇತ್ರದಲ್ಲಿ ಪ್ರತಿ ಸಂಕ್ರಾಂತಿಗೆ ದೀಪ ಸೇವೆ ಹಾಗೂ ಪ್ರತಿ ಭಾನುವಾರ ಅಗೇಲು ಸೇವೆ ನಡೆಯುತ್ತಿದೆ. ಹರಿಕೆ ಕೋಲಕ್ಕೆ ಹಾಗೂ ಇತರ ಸೇವೆಗಳು ನಡೆಸಲು ಅವಕಾಶವಿದೆ ಎಂದು ಅವರು ತಿಳಿಸಿದರು.
ಪ್ರತಿದಿನ ಬೆಳಗ್ಗೆ 6 ರಿಂದ ರಾತ್ರಿ 9 ರವರೆಗೆ ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಭಕ್ತಾಧಿಗಳ ಅನುಕೂಲಕ್ಕಾಗಿ ಕ್ಷೇತ್ರದಲ್ಲಿ ಸುಮಾರು 20 ಲಕ್ಷ ವೆಚ್ಚದಲ್ಲಿ ಪಾಕ ಶಾಲೆ, ಆವರಣಗೋಡೆ, ಕೊಠಡಿಗಳ ನಿರ್ಮಾಣ ಮತ್ತು ಇತರ ಸೌಲಭ್ಯಗಳನ್ನು ನೀಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಮುಂದಿನ ವರ್ಷದ ನೇಮೋತ್ಸವ 5 ನೇ ವರ್ಷದ್ದಾಗಿದ್ದು, ಅದ್ಧೂರಿಯಾಗಿ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.
ಕ್ಷೇತ್ರದ ಕಾರ್ಯದರ್ಶಿ ಯತೀಶ್ ಕುಮಾರ್ ಬಿ.ಕೆ., ಕೋಶಾಧಿಕಾರಿ ಗೌತಮ ಉಪಸ್ಥಿತರಿದ್ದರು.