ಭಾರತ-ಪಾಕ್‌ ನಡುವೆ ಮತ್ತೆ ಉದ್ವಿಗ್ನತೆ : ಹಲವು ವಿಮಾನಗಳ ಸಂಚಾರ ರದ್ದು

ನಿನ್ನೆ ರಾತ್ರಿ ಕದನ ವಿರಾಮ ಉಲ್ಲಂಘಿಸಿ ಡ್ರೋನ್‌ ದಾಳಿ ನಡೆಸಿದ ಪಾಕ್‌

ನವದೆಹಲಿ: ನಿನ್ನೆ ರಾತ್ರಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ ಗಡಿ ಭಾಗದಲ್ಲಿ ಡ್ರೋನ್‌ ದಾಳಿಗೆ ಯತ್ನಿಸಿದ ಹಿನ್ನೆಲೆಯಲ್ಲಿ ವಿಮಾನ ಸಂಚಾರ ಮತ್ತೊಮ್ಮೆ ವ್ಯತ್ಯಯವಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಮತ್ತೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಕಾರಣಕ್ಕಾಗಿ ಇಂದು ಇಂಡಿಗೊ ಮತ್ತು ಏರ್‌ ಇಂಡಿಯಾ ಉತ್ತರ ಮತ್ತು ಪಶ್ಚಿಮ ಭಾರತದ ಹಲವು ನಗರಗಳ ವಿಮಾನ ಸಂಚಾರವನ್ನು ರದ್ದುಗೊಳಿಸಿವೆ.

ಇಂಡಿಗೊ, ಶ್ರೀನಗರ, ಜಮ್ಮು, ಲೇಹ್‌, ಚಂಡೀಗಢ, ಅಮೃತಸರ ಮತ್ತು ರಾಜ್‌ಕೋಟ್‌ಗೆ ಶನಿವಾರದ ತನಕ ವಿಮಾನ ಸಂಚಾರ ರದ್ದುಗೊಳಿಸಿದೆ. ಏರ್‌ ಇಂಡಿಯಾ ಕೂಡ ಶ್ರೀನಗರ, ಲೇಹ್‌, ಜೋಧ್‌ಪುರ, ಅಮೃತಸರ, ಭುಜ್‌, ಜಾಮ್‌ನಗರ, ಚಂಡೀಗಢ, ರಾಜ್‌ಕೋಟ್‌ಗೆ ಹೋಗುವ ಮತ್ತು ಬರುವ ಎಲ್ಲ ವಿಮಾನಗಳನ್ನು ರದ್ದುಪಡಿಸಿದೆ.

















































 
 

ಹೊಸ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ವಿಮಾಗಳನ್ನು ರದ್ದುಪಡಿಸಲಾಗಿದೆ. ನಮ್ಮ ತಂಡ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ ಎಂದು ಇಂಡಿಗೊ ಮತ್ತು ಏರ್‌ ಇಂಡಿಯಾ ಪ್ರಕಟಣೆ ತಿಳಿಸಿದೆ.

ನಿನ್ನೆ ರಾತ್ರಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಯುದ್ಧದ ಕುರಿತು ಭಾಷಣ ಮಾಡಿದ ಬೆನ್ನಿಗೆ ಮೋದಿ ಪಾಕಿಸ್ಥಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ ಜಮ್ಮು ಹಾಗೂ ಪಂಜಾಬ್‌ನಲ್ಲಿ ಪಾಕ್ ಡ್ರೋನ್ ದಾಳಿ ನಡೆಸಿದೆ.

ಜಮ್ಮು, ಸಾಂಬಾ ಸೇರಿದಂತೆ ಹಲವೆಡೆ ಡ್ರೋನ್‌ಗಳು ಹಾರಾಟ ನಡೆಸಿವೆ. ಅಲ್ಲದೇ ಪಂಜಾಬ್‌ನ ಅಮೃತಸರದಲ್ಲೂ ಡ್ರೋನ್‌ಗಳ ಹಾರಾಟ ಕಂಡುಬಂದಿದ್ದು, ಅಮೃತಸರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ನಾಗರಿಕರು ಮನೆಯಿಂದ ಹೊರಬಾರದಂತೆ ಸೂಚನೆ ನೀಡಲಾಗಿತ್ತು. ಸಾಂಬಾ ಪ್ರದೇಶದಲ್ಲಿ ಬ್ಲಾಕ್‌ಔಟ್ ಘೋಷಿಸಲಾಗಿತ್ತು.

ಸುಮಾರು 50-60 ಪಾಕ್ ಡ್ರೋನ್‌ಗಳು ದಾಳಿ ನಡೆಸಿವೆ ಎಂದು ಮೂಲಗಳು ತಿಳಿಸಿವೆ. ಪಾಕ್‌ನ ಎಲ್ಲ ಡ್ರೋನ್‌ಗಳನ್ನು ಭಾರತದ ಏರ್ ಡಿಫೆನ್ಸ್ ಸಿಸ್ಟಂ ನೆಲಕ್ಕೆ ಉರುಳಿಸಿದೆ. ಪಾಕ್ ಡ್ರೋನ್ ದಾಳಿ ಬೆನ್ನಲ್ಲೇ ದೆಹಲಿ-ಅಮೃತಸರದ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದ್ದು, ಇಂಡಿಗೋ ವಿಮಾನ ದೆಹಲಿಗೆ ವಾಪಸ್ ಆಗಿದೆ.

ಇದಕ್ಕೂ ಮುನ್ನ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಿಮ್ಮ ನ್ಯೂಕ್ಲಿಯರ್ ಬ್ಲ್ಯಾಕ್‌ಮೇಲ್‌ಗೆ ನಾವು ಬೆದರುವುದಿಲ್ಲ. ಭಯೋತ್ಪಾದಕತೆ ಮತ್ತು ಮಾತುಕತೆ ಒಂದೇ ಸಮಯದಲ್ಲಿ ನಡೆಯಲು ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ನಡೆಯಲು ಸಾಧ್ಯವಿಲ್ಲ. ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವೆ ಮಾತುಕತೆ ನಡೆದರೆ ಅದು ಭಯೋತ್ಪಾದನೆ ಮತ್ತು ಪಿಒಕೆ ಬಗ್ಗೆ ಮಾತ್ರ ಎಂದು ನಾನು ಅಂತಾರಾಷ್ಟ್ರೀಯ ಸಮುದಾಯಕ್ಕೆ ಹೇಳಲು ಬಯಸುತ್ತೇನೆ. ಕಾಶ್ಮೀರದ ಬಗ್ಗೆ ನಮಗೆ ಸ್ಪಷ್ಟವಾದ ನಿಲುವು ಇದೆ. ಪಿಒಕೆ ಮರಳುವುದು ಒಂದು ಬಾಕಿಯಿದೆ. ಅವರು ಭಯೋತ್ಪಾದಕರನ್ನು ಹಸ್ತಾಂತರಿಸುವ ಬಗ್ಗೆ ಮಾತನಾಡಿದರೆ, ನಾವು ಮಾತನಾಡಬಹುದು ಅಷ್ಟೇ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top