ಆರ್‌ಸಿಬಿ-ಕೆಕೆಆರ್ ಮುಖಾಮುಖಿಯೊಂದಿಗೆ ಐಪಿಎಲ್ ಮರಳಿ ಅರಂಭ
ಮುಂಬಯಿ: ಯುದ್ಧದ ಕಾರಣದಿಂದ ರದ್ದುಪಡಿಸಲಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ನ ಉಳಿದ ಪಂದ್ಯಗಳನ್ನು ಮುಂದುವರಿಸಲು ಬಿಸಿಸಿಐ ನಿರ್ಧರಿಸಿದೆ. ಇದಕ್ಕಾಗಿ ಹೊಸ ವೇಳಪಟ್ಟಿಯನ್ನು ರಚಿಲಾಗಿದೆ. ಅದರಂತೆ ಮೇ 17ರಿಂದ ಐಪಿಎಲ್ಗೆ ಮತ್ತೆ ಚಾಲನೆ ದೊರೆಯಲಿದೆ. ಆದರೆ ಐಪಿಎಲ್ ಪಂದ್ಯಗಳು ನಡೆಯುವ ಸ್ಥಳಗಳು ಬದಲಾಗಲಿವೆ ಮತ್ತು ಪಂದ್ಯಗಳ ನಡುವಿನ ಅಂತರವೂ ವ್ಯತ್ಯಾಸವಾಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಈಗಾಗಲೇ 57 ಪಂದ್ಯಗಳು ಪೂರ್ಣಗೊಂಡಿದ್ದು, ಇದೀಗ ಉಳಿದ ಪಂದ್ಯಗಳಿಗೆ ದಿನಾಂಕ ನಿಗದಿ ಮಾಡಲಾಗಿದೆ. ಮೇ 9ರ ಬಳಿಕ ಐಪಿಎಲ್ ಪಂದ್ಯಗಳು ನಡೆದಿಲ್ಲ. ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ನಂತರ ಬಿಸಿಸಿಐ ತಾತ್ಕಲಿಕವಾಗಿ ಪಂದ್ಯಗಳನ್ನು ರದ್ದುಪಡಿಸುವುದಾಗಿ ಘೋಷಿಸಿತ್ತು.
ಮೇ 17ರಂದು ಮತ್ತೆ ಶುರುವಾಗಲಿದ್ದು, ಅದರಂತೆ ಶನಿವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ಎದುರಾಳಿಯಾಗಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯನಡೆಯಲಿದೆ.
ಸರಕಾರ, ಭದ್ರತಾ ಪಡೆಗಳು ಹಾಗೂ ಸಂಬಂಧಪಟ್ಟ ಎಲ್ಲರ ಜೊತೆ ಚರ್ಚಿಸಿದ ಬಳಿಕ ಐಪಿಎಲ್ ಪಂದ್ಯಗಳನ್ನು ಪುನರಾರಂಭಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಮೇ 23ರಂದು ನಡೆಯಲಿರುವ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಕೂಡ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜರುಗಲಿರುವುದು ವಿಶೇಷ.
ಮೇ 27ಕ್ಕೆ ಲೀಗ್ ಹಂತದ ಪಂದ್ಯಗಳು ಮುಗಿದು ಮೇ 29ರಿಂದ ಪ್ಲೇ ಆಫ್ ಪಂದ್ಯಗಳು ಶುರುವಾಗಲಿವೆ. ಮೇ 29ಕ್ಕೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆದರೆ ಮೇ 30 ಎಲಿಮಿನೇಟರ್ ಪಂದ್ಯ ನಡೆಯಲಿದೆ. ಜೂನ್ 1ರಂದು ಎರಡನೇ ಕ್ವಾಲಿಫೈಯರ್ ಪಂದ್ಯ ನಡೆದರೆ ಜೂನ್ 3ರಂದು ಫೈನಲ್ ಪಂದ್ಯ ನಡೆಯಲಿದೆ. ಬೆಂಗಳೂರು, ಜೈಪುರ, ದೆಹಲಿ, ಮುಂಬೈ, ಅಹಮದಾಬಾದ್, ಲಖನೌದಲ್ಲಿ ಉಳಿದ ಪಂದ್ಯಗಳು ನಡೆಯಲಿವೆ. ಕ್ವಾಲಿಫೈಯರ್, ಎಲಿಮಿನೇಟರ್ ಮತ್ತು ಫೈನಲ್ ಪಂದ್ಯದ ಸ್ಥಳಗಳು ನಿಗದಿಯಾಗಿಲ್ಲ.