ಪುತ್ತೂರು: ಕೃಷಿಯಷ್ಟೇ ಅಲ್ಲ ಕೃಷಿ ವಸ್ತುಗಳ ಮಾರುಕಟ್ಟೆ ಹಾಗೂ ಕೃಷಿ ಬೆಳವಣಿಗೆಯ ಬಗ್ಗೆ ಪುತ್ತೂರಿನ ಮುಳಿಯ ಗೋಲ್ಡ್ ಮತ್ತು ಡೈಮಂಡ್ ವತಿಯಿಂದ ಕೃಷಿ ಕುರಿತು ಸಂವಾದ ‘ಕೃಷಿ ಗೋಷ್ಠಿ’ ಸಂಸ್ಥೆಯ ಸುಲೋಚನಾ ಟವರ್ಸ್ನ ಅಪರಂಜಿ ರೂಫ್ ಗಾರ್ಡನ್ನಲ್ಲಿ ಭಾನುವಾರ ನಡೆಯಿತು.
ಮುಳಿಯ ನೂತನ ನವೀಕೃತ ವಿಸ್ತ್ರತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆಯನ್ನು ಸೃಷ್ಟಿಸಲಾಗಿದ್ದು, ಮುಳಿಯ ಗೋಲ್ಡ್ ಮತ್ತು ಡೈಮಂಡ್ ಆಡಳಿತ ಮಂಡಳಿಯ ಕೃಷ್ಣ ನಾರಾಯಣ ಮುಳಿಯ ಉದ್ಘಾಟಿಸಿ ಮಾತನಾಡಿ, ಕೃಷಿ ಬೆಳವಣಿಗೆಗೆ ವೈಚಾರಿಕವಾದ ಚಿಂತನೆಗಳು ಅಗತ್ಯ ಇದೆ. ಕೃಷಿಯ ಮಾರುಕಟ್ಟೆಯ ದೃಷ್ಟಿಯನ್ನು ಕೂಡಾ ಸರಿಯಾಗಿ ಗಮನಿಸಿಕೊಂಡು ಕೃಷಿ ಮಾಡಿದಾಗ ಯಶಸ್ಸು ಸಾಧ್ಯ ಎಂದರು.
ಕಾವೇರಿಕಾನದ ಕೃಷಿಕ ಕೃಷ್ಣಪ್ರಸಾದ್ ಅವರು ಮಾತನಾಡಿ, ಕೃಷಿಯ ಜೊತೆಗೆ ಕೃಷಿ ವಸ್ತುಗಳ ಮಾರುಕಟ್ಟೆ ಹೇಗೆ, ಕೃಷಿಕನೇ ಕಡಿಮೆ ವೆಚ್ಚದಲ್ಲಿ ಹೇಗೆ ಮಾರುಕಟ್ಟೆ ಮಾಡಬಹುದು ಎನ್ನುವುದು ಕೂಡಾ ಮುಖ್ಯ ಈ ದೃಷ್ಟಿಯಿಂದ ತಾಳ್ಮೆ ಹಾಗೂ ಧೈರ್ಯ ಅಗತ್ಯ ಎಂದರು.
ಕೃಷಿ ಅಭಿವೃದ್ಧಿಗೆ ರೈತರಿಗೆ ಕೈಗೆಟಕುವ ದರದಲ್ಲಿ ಯಂತ್ರಗಳನ್ನು ತಾವೇ ಆವಿಷ್ಕಾರ ಮಾಡಿರುವ ಭಾಸ್ಕರ ಗೌಡ ಚಾರ್ವಾಕ ಮಾತನಾಡಿ, ಅನಿವಾರ್ಯತೆಗಳೇ ಕೃಷಿಯಲ್ಲಿ ಹೊಸ ಆವಿಷ್ಕಾರಗಳಿಗೆ ಕಾರಣವಾಗುತ್ತದೆ. ನಮಗೆ ಮರ ಏರಲು ಕಷ್ಟವಾದಾಗ ಸರಳವಾದ ಯಂತ್ರದ ಆವಿಷ್ಕಾರ ಸಾಧ್ಯವಾಯಿತು ಎಂದರು.
ಕೃಷಿಕ ಡಾ.ವೇಣುಗೋಪಾಲ ಕಳೆಯತ್ತೋಡಿ, ಎಂಟೆಕ್ ಪದವೀಧರ ಕೃಷಿಕ ಸುಬ್ರಹ್ಮಣ್ಯ ಪ್ರಸಾದ್ ಚಣಿಲ, ಯೂಟ್ಯೂಬರ್ ರಾಧಾಕೃಷ್ಣ ಆನೆಗುಂಡಿ ವಿವಿಧ ವಿಷಯಗಳ ಕುರಿತು ಮಾತನಾಡಿದರು.
ಸಮಾರೋಪ ಸಮಾರಂಭದಲ್ಲಿ ಮುಳಿಯ ಗೋಲ್ಡ್ ಮತ್ತು ಡೈಮಂಡ್ ಆಡಳಿತ ಮಂಡಳಿಯ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಕೃಷಿ ಕೂಡಾ ಉದ್ಯಮದ ರೂಪ ಪಡೆಯಬೇಕು. ಸಾತ್ವಿಕ ಲಾಭ ಇಲ್ಲದೇ ಹೋದರೆ ಯಾವ ಕೆಲಸವೂ ಹೆಚ್ಚು ಸಮಯ ಉಳಿಯಲು ಸಾಧ್ಯವಿಲ್ಲ. ಹೀಗಾಗಿ ಕೃಷಿ ಕೂಡಾ ಉದ್ಯಮವಾದರೆ ಮಾತ್ರವೇ ಕೃಷಿ ನಿರಂತರವಾಗಿ ಸುದೃಢವಾಗಿ ಮುಂದೆ ಸಾಗಬಹುದು ಎಂದು ಹೇಳಿದರು.
ಕೃಷಿ ಸಂವಾದವನ್ನು ಪತ್ರಕರ್ತ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಹಾಗೂ ಮುಳಿಯ ಮಾರ್ಕೆಂಟಿಗ್ ವಿಭಾಗದ ಸಲಹೆಗಾರ ವೇಣು ಶರ್ಮ ನಡೆಸಿದರು.