ಅಮೆರಿಕಕ್ಕೆ ಭಾರತದ ಸ್ಪಷ್ಟ ನಿಲುವು ತಿಳಿಸಿದ ಪ್ರಧಾನಿ ಮೋದಿ
ನವದೆಹಲಿ: ಪಾಕಿಸ್ಥಾನ ಮತ್ತೆ ದಾಳಿ ನಡೆಸಿದರೆ ತಕ್ಕ ತಿರುಗೇಟು ನೀಡುತ್ತೇವೆ. ಆ ಕಡೆಯಿಂದ ಗುಂಡು ಹಾರಿಸಿದರೆ ಇಲ್ಲಿಂದಲೂ ಗುಂಡು ಸಿಡಿಯುತ್ತದೆ. ನಮಗೆ ಯಾರ ಮಧ್ಯಸ್ಥಿಕೆ ಕೂಡ ಬೇಕಾಗಿಲ್ಲ ಎಂದು ಅಮೆರಿಕಕ್ಕೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟ ಸಂದೇಶ ನೀಡಿದ್ದಾರೆ.
ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಜೊತೆ ಪಾಕ್ ಕದನ ವಿರಾಮ ಉಲ್ಲಂಘಿಸಿದ ಬಳಿಕ ಮೋದಿ ಫೋನ್ ಮೂಲಕ ಮಾತುಕತೆ ನಡೆಸಿ ಭಾರತದ ನಿಲುವನ್ನು ತಿಳಿಸಿದ್ದಾರೆ.
ಕಾಶ್ಮೀರದ ಬಗ್ಗೆ ಭಾರತ ಸ್ಪಷ್ಟವಾದ ನಿಲುವನ್ನು ಹೊಂದಿದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆದುಕೊಳ್ಳುವುದೇ ಈಗ ಉಳಿದಿರುವ ಒಂದೇ ವಿಷಯ. ಈಗ ಮಾತನಾಡಲು ಬೇರೆ ಏನು ಉಳಿದಿಲ್ಲ. ಪಾಕಿಸ್ಥಾನ ಭಯೋತ್ಪಾದಕರನ್ನು ಹಸ್ತಾಂತರಿಸುವ ಬಗ್ಗೆ ಮಾತನಾಡಿದರೆ ನಾವು ಸಹ ಮಾತನಾಡಬಹುದು. ನಮಗೆ ಬೇರೆ ಯಾವುದೇ ವಿಷಯದ ಉದ್ದೇಶವಿಲ್ಲ. ನಾವು ಯಾರ ಮಧ್ಯಸ್ಥಿಕೆಯನ್ನು ಬಯಸಲ್ಲ ಮತ್ತು ಭಾರತಕ್ಕೆ ಅದರ ಅಗತ್ಯವು ಇಲ್ಲ ಎಂದು ಹೇಳಿದ್ದಾರೆ.
ಉಗ್ರರನ್ನ ಪಾಕ್ ನಮಗೆ ಹಸ್ತಾಂತರ ಮಾಡಬೇಕು. ಅದರ ಬಗ್ಗೆ ಮಾತಾಡಲು ಸಿದ್ಧರಿದ್ದರೆ ಚರ್ಚೆಗೆ ರೆಡಿ. ಅದು ಬಿಟ್ಟರೆ ಮಾತನಾಡಲು ಬೇರೇನೂ ಉಳಿದಿಲ್ಲ. ಕಾಶ್ಮೀರ ವಿವಾದ ಬಗೆಹರಿಸಲು ಯಾರ ಮಧ್ಯಸ್ಥಿಕೆ ಬೇಡ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.