ತೀವ್ರಗೊಂಡ ಸಮರ : ಐಪಿಎಲ್‌ ಕೂಟ ಅತಂತ್ರ

ನಿನ್ನೆ ಧರ್ಮಶಾಲಾದ ಪಂದ್ಯಕ್ಕೆ ಅರ್ಧಕ್ಕೆ ಮೊಟಕು

ವಿಮಾನ ಸಂಚಾರ ಇಲ್ಲದೆ ಆಟಗಾರರನ್ನು ಸಾಗಿಸುವುದಕ್ಕೆ ಪ್ರಯಾಸ

ನವದೆಹಲಿ: ಯುದ್ಧದಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಅತಂತ್ರಗೊಂಡಿದೆ. ಗುರುವಾರ ರಾತ್ರಿ ಧರ್ಮಶಾಲಾ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ರಾತ್ರಿ 9.35ಕ್ಕೆ ನಿಲ್ಲಿಸಲಾಗಿತ್ತು. ಹಿಮಾಚಲ ಪ್ರದೇಶದ ಧರ್ಮಶಾಲಾ ಪಠಾಣ್‌ಕೋಟ್‌ನಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿದ್ದು, ಪಠಾಣ್‌ಕೋಟ್‌ನಲ್ಲಿ ಗಡಿಯಾಚೆಯಿಂದ ವಾಯುದಾಳಿಗಳು ನಡೆದ ಹಿನ್ನೆಲೆಯಲ್ಲಿ 10.1 ಓವರ್‌ ಆಗಿದ್ದಾಗೆ ಡಿಧೀರ್‌ ಪಂದ್ಯ ರದ್ದುಮಾಡಿ ಜನರನ್ನು ಹೊರಕಳುಹಿಸಲಾಯಿತು. ಇದೀಗ ಉಳಿದ ಪಂದ್ಯಗಳ ಭವಿಷ್ಯ ಇಂದು ನಡೆಯುವ ಬಿಸಿಸಿಐಯ ಮಹತ್ವದ ಸಭೆಯಲಿ ನಿರ್ಧಾರವಾಗಲಿದೆ.

















































 
 

ಬಿಸಿಸಿಐ ಪಂದ್ಯಾವಳಿಯನ್ನು ನಿಲ್ಲಿಸುವ ಅಥವಾ ವೇಳಾಪಟ್ಟಿಯನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದೆ ಎಂದು ತಿಳಿದುಬಂದಿದೆ. ಭದ್ರತಾ ಕಾರಣಗಳಿಂದಾಗಿ ಧರ್ಮಶಾಲಾ ಪಂದ್ಯವನ್ನು ನಿಲ್ಲಿಸಲಾಯಿತು. ಆಟಗಾರರನ್ನು ತಕ್ಷಣವೇ ಹೋಟೆಲ್‌ಗೆ ವಾಪಸ್ ಕಳುಹಿಸಲಾಯಿತು. ಈ ಪ್ರದೇಶದಲ್ಲಿ ವಿಮಾನ ನಿಲ್ದಾಣಗಳು ಮುಚ್ಚಿರುವುದರಿಂದ, ಐಪಿಎಲ್‌ ತಂಡಗಳನ್ನು ರೈಲಿನ ಮೂಲಕ ದೆಹಲಿಗೆ ಸಾಗಿಸಲು ಪ್ರಯತ್ನಿಸುತ್ತಿದೆ.

ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ ಮತ್ತು ಸರ್ಕಾರದೊಂದಿಗೆ ಸಮಾಲೋಚಿಸುತ್ತಿದ್ದೇವೆ ಮತ್ತು ಶುಕ್ರವಾರ ಐಪಿಎಲ್ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ತಿಳಿಸಿದ್ದಾರೆ. ಪರಿಸ್ಥಿತಿ ದಿನೇ ದಿನೇ ಬದಲಾಗುತ್ತಿದೆ. ನಮಗೆ ಸರಕಾರ ಹೇಳುತ್ತದೋ ಅದನ್ನು ಅನುಸರಿಸುತ್ತೇವೆ. ನಮ್ಮ ಆದ್ಯತೆ ಎಲ್ಲ ಆಟಗಾರರು, ಅಭಿಮಾನಿಗಳು ಮತ್ತು ಫ್ರಾಂಚೈಸಿಯ ಸುರಕ್ಷತೆಯಾಗಿದೆ ಎಂದು ಅವರು ಹೇಳಿದ್ದಾರೆ.

ಧರ್ಮಶಾಲಾದಲ್ಲಿ ಪಂದ್ಯವನ್ನು ನಿಲ್ಲಿಸುವ ನಿರ್ಧಾರವನ್ನು ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ತೆಗೆದುಕೊಂಡಿದೆ ಎಂದು ಮೂಲಗಳು ಬಹಿರಂಗಪಡಿಸಿವೆ. ಅವರಿಗೆ ಹಿರಿಯ ಕ್ರಿಕೆಟ್ ಅಧಿಕಾರಿಯಿಂದ ಕರೆ ಬಂತು. ಕರೆಯ ನಂತರ ಕ್ರೀಡಾಂಗಣದ ಲೈಟ್​ಗಳನ್ನು ನಂದಿಸಲಾಯಿತು. ಮೈದಾನದಲ್ಲಿ ಕತ್ತಲೆ ಆವರಿಸಿ ಪ್ರೇಕ್ಷಕರನ್ನು ತಕ್ಷಣವೇ ಹೊರಹೋಗುವಂತೆ ಕೇಳಲಾಯಿತು. ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಬೌಂಡರಿಯ ಬಳಿ ನಿಂತು ಅಭಿಮಾನಿಗಳಿಗೆ ಕ್ರೀಡಾಂಗಣದಿಂದ ಹೊರಹೋಗುವಂತೆ ಸೂಚಿಸುತ್ತಿದ್ದರು. ಎರಡೂ ತಂಡಗಳ ಆಟಗಾರರನ್ನು ಬಸ್ ಹತ್ತಿ ಹೋಟೆಲ್‌ಗೆ ಕರೆದೊಯ್ಯಲಾಯಿತು.

ಆಟಗಾರರನ್ನು ಎಷ್ಟು ಅವಸರದಲ್ಲಿ ಸ್ಥಳಾಂತರಿಸಲಾಯಿತೆಂದರೆ, ಅನೇಕರು ಪ್ಯಾಡ್‌ಗಳನ್ನು ಧರಿಸಿಕೊಂಡೇ ಹೋಟೆಲ್‌ಗೆ ತಲುಪಿದರು. ಪಂಜಾಬ್ ತಂಡದ ಬಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ಕುಳಿತಿದ್ದರು. ಆ ಜಾಗ ತುಂಬಾ ಜನದಟ್ಟಣೆಯಿಂದ ಕೂಡಿತ್ತು. ವಿದೇಶಿ ಆಟಗಾರರು ಚಿಂತಿತರಾಗಿದ್ದರು. ಅವರಲ್ಲಿ ಹಲವರು ಮನೆಗೆ ಹಿಂತಿರುಗಲು ಬಯಸಿದ್ದರಂತೆ.

ಈ ಪ್ರದೇಶದಲ್ಲಿ ವಿಮಾನ ನಿಲ್ದಾಣ ಮುಚ್ಚಿದ ಕಾರಣ ಬಿಸಿಸಿಐ ತಂಡಗಳನ್ನು ರೈಲಿನ ಮೂಲಕ ದೆಹಲಿಗೆ ಕಳುಹಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಶುಕ್ಲಾ ಹೇಳಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿಡಲು ಬಿಸಿಸಿಐ ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿದೆ. ಫ್ರಾಂಚೈಸಿಗಳು ವಿದೇಶಿ ಆಟಗಾರರಿಗೆ ಪರಿಸ್ಥಿತಿಯ ಬಗ್ಗೆ ತಿಳಿಸುತ್ತಿವೆ. ಅವರು ಹೋಗಲು ಬಯಸಿದರೆ, ಅವರ ಪ್ರಯಾಣದ ವ್ಯವಸ್ಥೆ ಮಾಡಲಾಗುವುದು ಎಂದು ಅವರಿಗೆ ಭರವಸೆ ನೀಡಲಾಗಿದೆ. ಬಿಸಿಸಿಐ ಇತರ ಮಂಡಳಿಗಳಿಗೂ ಪರಿಸ್ಥಿತಿಯ ಬಗ್ಗೆ ತಿಳಿಸಲಿದೆ. ಅವರು ತಮ್ಮ ಆಟಗಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ.

ಇದಕ್ಕೂ ಮೊದಲು, ಜೈಪುರದ ಎಸ್‌ಎಂಎಸ್‌ ಕ್ರೀಡಾಂಗಣಕ್ಕೆ ಒಂದು ವಾರದ ನಂತರ ನಡೆಯಲಿರುವ ಪಂದ್ಯಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಎಫ್‌ಐಆರ್ ದಾಖಲಿಸಲಾಗಿದೆ ಎಂದು ಜೈಪುರ ನಗರ ಡಿಸಿಪಿ ದಕ್ಷಿಣ ಬಲರಾಮ್ ತಿಳಿಸಿದ್ದಾರೆ. ಪೊಲೀಸರು ಇ-ಮೇಲ್ ಕಳುಹಿಸಿದವರನ್ನು ಹುಡುಕುತ್ತಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top