ಜನಾರ್ದನ ರೆಡ್ಡಿ ಶಾಸಕ ಸ್ಥಾನ ರದ್ದು

ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಜನಾರ್ದನ ರೆಡ್ಡಿ

ಬೆಂಗಳೂರು : ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಗಂಗಾವತಿ ಶಾಸಕ ಜನಾರ್ದನ ರೆಡ್ಡಿಯವರ ಶಾಸಕ ಸ್ಥಾನ ರದ್ದಾಗಿದೆ. ಸಿಬಿಐ ಕೋರ್ಟ್ 7 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ ಬೆನ್ನಿಗೆ ಜನಾರ್ದನ ರೆಡ್ಡಿಯವರನ್ನು ಜೈಲಿಗೆ ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಜನಾರ್ದನ ರೆಡ್ಡಿ ಶಾಸಕ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಜನಾರ್ದನ ರೆಡ್ಡಿ ಆಂಧ್ರದ ಚಂಚಲಗುಡ ಜೈಲಿನಲ್ಲಿದ್ದಾರೆ.

ಗಣಿಗಾರಿಕೆ ಪ್ರಕರಣ ಸುದೀರ್ಘ ವಿಚಾರಣೆ ನಡೆಸಿದ್ದ ಹೈದರಾಬಾದ್ ಸಿಬಿಐ ಕೋರ್ಟ್ ಏಳು ವರ್ಷಗಳ ಶಿಕ್ಷೆ ನೀಡಿ ತೀರ್ಪು ನೀಡಿತ್ತು. ಹೇಗಾದರೂ ಮಾಡಿ ಶಾಸಕ ಸ್ಥಾನ ಉಳಿಸಿಕೊಳ್ಳಲು ಶಿಕ್ಷೆ ಕಡಿಮೆ ಮಾಡಿ ಎಂದು ರೆಡ್ಡಿ ಕೋರ್ಟ್​ ಮುಂದೆ ಅಂಗಲಾಚಿ ಬೇಡಿಕೊಂಡಿದ್ದರು. ಆದರೆ ಕೋರ್ಟ್​ ರೆಡ್ಡಿ ಮನವಿಯನ್ನು ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಜನಾರ್ದನ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಈ ಕುರಿತು ಆದೇಶ ಹೊರಡಿಸಿದ್ದಾರೆ.

















































 
 

ಸಿಬಿಐ ಕೋರ್ಟ್ ತೀರ್ಪು ಪ್ರಕಟವಾದ ತಕ್ಷಣದಿಂದಲೇ ಜಾರಿಗೆ ಬರುವಂತೆ ಜನಾರ್ದನ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ಮುಂದಿನ 6 ವರ್ಷಗಳ ಕಾಲ ಅನರ್ಹಗೊಳಿಸಿ ಕರ್ನಾಟಕ ವಿಧಾನಸಭೆ ಆದೇಶ ಹೊರಡಿಸಿದೆ. ಈ ಅನರ್ಹತೆ ಜನಾರ್ದನ ರೆಡ್ಡಿ ಶಿಕ್ಷೆ ಮುಗಿಸಿ ಬಿಡುಗಡೆಯಾಗುವವರೆಗೆ ಅಥವಾ ಈ ಶಿಕ್ಷೆಗೆ ಕೋರ್ಟ್ ತಡೆ ನೀಡುವವರೆಗೆ ಇರಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ನಿಮಯದ ಪ್ರಕಾರ ಯಾವುದೇ ಶಾಸಕ ಅಥವಾ ಸಂಸದ 2 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟು ಶಿಕ್ಷೆಗೆ ಗುರಿಯಾದರೆ ಶಾಸಕ ಸ್ಥಾನ ರದ್ದಾಗಲಿದೆ. ಅದರಂತೆ ಈಗ ರೆಡ್ಡಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ.

ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ಕೋರ್ಟ್​, ಜನಾರ್ದನ ರೆಡ್ಡಿ ಅನುಮಾತಿ ಕೊಟ್ಟಿರಲಿಲ್ಲ. ಹೀಗಾಗಿ ರೆಡ್ಡಿ ಕೆಆರ್​ಎಸ್​ ಪಕ್ಷವನ್ನು ಕಟ್ಟಿ ಅದರಿಂದಲೇ ​ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ತಮ್ಮ ಸಮೀಪ ಸ್ಪರ್ಧಿ ಕಾಂಗ್ರೆಸ್​ನ ಇಕ್ಬಾಲ್​ ಅನ್ಸಾರಿ ಅವರನ್ನು ಸೋಲಿಸಿ ರಾಜಕೀಯ ಪುನರ್ಜನ್ಮ ಪಡೆದುಕೊಂಡಿದ್ದರು. ಈಗ ರೆಡ್ಡಿ ತಮ್ಮ ಶಾಸಕ ಸ್ಥಾನ ಕಳೆದುಕೊಂಡಿದ್ದರಿಂದ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ.

ಏನಿದು ಪ್ರಕರಣ?

ಆಂಧ್ರ ಪ್ರದೇಶದಲ್ಲಿ ವೈ.ಎಸ್‌. ರಾಜಶೇಖರ ರೆಡ್ಡಿ ಹಾಗೂ ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಓಬಳಾಪುರಂ ಅಕ್ರಮ ಗಣಿಕಾರಿಕೆ ಪ್ರಕರಣ ಬೆಳಕಿಗೆ ಬಂದಿತ್ತು. ಆಂಧ್ರ-ಕರ್ನಾಟಕದ ಗಡಿಗೆ ಹೊಂದಿಕೊಂಡ ಓಬಳಾಪುರಂ ಬೆಟ್ಟದಲ್ಲಿ ಅದಿರಿನ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಆರೋಪಿಸಲಾಗಿತ್ತು. ಗಣಿ‌ಗಾರಿಕೆ ಮಂಜೂರಾತಿ ವೇಳೆ ಇಲಾಖೆಗಳಿಂದ ಅಕ್ರಮವಾಗಿದೆ. ಅರಣ್ಯ ಇಲಾಖೆ, ಗಣಿ‌ ಇಲಾಖೆಯಿಂದ ಅಕ್ರಮ‌ ಆಗಿದೆ ಎಂದು ಆರೋಪಿಸಲಾಗಿತ್ತು. ಓಬಳಾಪುರ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 884 ಕೋಟಿ ಅಕ್ರಮ ಎಸಗಿರೋದು ಸಾಬೀತಾಗಿದೆ. ಒಟ್ಟು 29 ಲಕ್ಷ ಟನ್ ಅದಿರು ಲೂಟಿ ಮಾಡಿರುವ ಆರೋಪ ಇವರ ಮೇಲಿದೆ. ಈಗಾಗಲೇ ಇದೇ ಪ್ರಕರಣದಲ್ಲಿ ಮೂರುವರೇ ವರ್ಷ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top