ಪಾಕಿಸ್ಥಾನದ ಸೇನಾ ನೆಲೆಯ ಪಕ್ಕದಲ್ಲೇ ಸ್ಫೋಟ
ಲಾಹೋರ್: ಭಾರತ ಆಪರೇಷನ್ ಸಿಂದೂರ್ ನಡೆಸಿದ ಮರುದಿನವೇ ಪಾಕಿಸ್ಥಾನದ ಪ್ರಮುಖ ನಗರ ಲಾಹೋರ್‌ನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಜನರು ಭೀತಿಯಿಂದ ಹೊರಗೋಡಿ ಬಂದಿದ್ದಾರೆ. ಲಾಹೋರ್‌ನ ವಿಮಾನ ನಿಲ್ದಾಣದ ಬಳಿ ಈ ಸ್ಫೋಟ ಸಂಭವಿಸಿದೆ. ಇಲ್ಲಿಯೇ ಸಮೀಪ ಲಷ್ಕರ್ ಇ ತೈಬಾದ ಮುಖಂಡ ಹಾಫಿಜ್ ಸಯೀದ್‌ನ ಮನೆಯಿದೆ ಎಂದು ಕೆಲದಿನಗಳ ಹಿಂದೆ ವರದಿಯಾಗಿತ್ತು.
ಇಂದು ಬೆಳಗ್ಗೆ ಪಾಕಿಸ್ಥಾನದ ಲಾಹೋರ್‌ನಲ್ಲಿ ದೊಡ್ಡ ಸ್ಫೋಟಗಳು ನಡೆದಿವೆ. ದೂರದವರೆಗೆ ಸ್ಫೋಟದ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಅಲರ್ಟ್ ನೀಡುವ ಸೈರನ್‌ಗಳು ಮೊಳಗಿದವು. ಭೀತಿಯಿಂದ ಜನರು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಸೈರನ್ ಶಬ್ದ ಹಾಗೂ ಸ್ಫೋಟದ ಹೊಗೆ ಕಾಣಿಸುತ್ತಿರುವ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ಲಾಹೋರ್‌ನ ಗೋಪಾಲ್ ನಗರ ಮತ್ತು ನಸೀರಾಬಾದ್ ಪ್ರದೇಶಗಳಲ್ಲಿ ವಾಲ್ಟನ್ ವಿಮಾನ ನಿಲ್ದಾಣದ ಬಳಿ ಸ್ಫೋಟಗಳು ಸಂಭವಿಸಿವೆ. ಜನರು ಭಯದಿಂದ ತಮ್ಮ ಮನೆಗಳಿಂದ ಹೊರಗೆ ಓಡುತ್ತಿರುವುದು ಕಂಡುಬಂದಿದೆ. ಈ ಪ್ರದೇಶ ಲಾಹೋರ್‌ನ ಪ್ರಮುಖ ವಾಣಿಜ್ಯ ಜಿಲ್ಲೆ ಮತ್ತು ಲಾಹೋರ್ ಸೇನಾ ನೆಲೆಯ ಪಕ್ಕದಲ್ಲಿದೆ.
ಈ ಸ್ಫೋಟಕ್ಕೆ 5-6 ಅಡಿ ಉದ್ದದ ಡ್ರೋನ್ ಕಾರಣವಾಗಿರಬಹುದು ಎನ್ನಲಾಗಿದೆ. ಸದ್ಯಕ್ಕೆ ಯಾವುದೇ ಸಾವು ನೋವು ಅಥವಾ ಆಸ್ತಿಪಾಸ್ತಿ ಹಾನಿ ಸಂಭವಿಸಿಲ್ಲ. ಭಾರತವು ಪಾಕಿಸ್ತಾನದಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿದ ಒಂದು ದಿನದ ನಂತರ ಈ ಘಟನೆ ಸಂಭವಿಸಿದೆ.