ಗಡಿ ನಿಯಂತ್ರಣ ರೇಖೆಯುದ್ದಕ್ಕೂ ದಾಳಿ ಮಾಡುತ್ತಿರುವ ಪಾಕ್ ಸೇನೆ
ನವದೆಹಲಿ: ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಬಳಿಕ ಹತಾಶಗೊಂಡಿರುವ ಪಾಕಿಸ್ಥಾನ ಗಡಿಯುದ್ದಕ್ಕೂ ನಿರಂತರ ದಾಳಿ ನಡೆಸುತ್ತಿದ್ದು, ನಿನ್ನೆ ರಾತ್ರಿ ನಡೆಸಿದ ಭಾರಿ ಶೆಲ್ ದಾಳಿಯಲ್ಲಿ 5 ಫೀಲ್ಡ್ ರೆಜಿಮೆಂಟ್ನ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಶರ್ಮಾ ಹುತಾತ್ಮರಾಗಿದ್ದಾರೆ. 32 ವರ್ಷದ ಜವಾನ್ ದಿನೇಶ್ ಕುಮಾರ್ ಶರ್ಮಾ, ಹರಿಯಾಣದ ಪಲ್ವಾಲ್ನ ಮೊಹಮ್ಮದ್ಪುರ ಗ್ರಾಮದವರು. ಅವರು ಪಾಕಿಸ್ತಾನದ ಆಕ್ರಮಣಕ್ಕೆ ಆಗಾಗ್ಗೆ ಸಿಲುಕುತ್ತಿರುವ ಹೈಟೆನ್ಶನ್ ಪ್ರದೇಶವಾದ ಎಲ್ಒಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಕಳೆದ ಕೆಲದಿನಗಳಿಂದ ಗಡಿಯಲ್ಲಿ ಪಾಕಿಸ್ಥಾನ ಸೇನೆ ನಿರಂತರವಾಗಿ ದಾಳಿ ಮಾಡುತ್ತಾ ಕದನ ವಿರಾಮ ಒಪ್ಪಂದ ಉಲ್ಲಂಘನೆ ಮಾಡುತ್ತಿದ್ದು, ಭಾರತವೂ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತಿತ್ತು. ಆದರೆ ಬುಧವಾರ ಮುಂಜಾನೆ ನಡೆದ ಆಪರೇಷನ್ ಸಿಂದೂರ್ ಬಳಿಕ ಪಾಕಿಸ್ಥಾನ ನಾಗರಿಕರನ್ನು ಗುರಿ ಮಾಡಿಕೊಂಡು ದಾಳಿ ಮಾಡಲಾರಂಭಿದ್ದು, 15 ನಾಗರಿಕರು ಮೃತಪಟ್ಟಿದ್ದಾರೆ. ಗಡಿಭಾಗದಲ್ಲಿರುವ ಜನರನ್ನು ಸೇನೆ ಸ್ಥಳಾಂತರಿಸತೊಡಗಿದೆ.
ಬುಧವಾರ ತಡರಾತ್ರಿ ಆರಂಭವಾದ ಶೆಲ್ ದಾಳಿಯು ಭಾರತದ ಮುಂಚೂಣಿ ಠಾಣೆಗಳು ಮತ್ತು ಹತ್ತಿರದ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆದಿದೆ. ಮೋರ್ಟರ್ ಗುಂಡುಗಳು ಮತ್ತು ಫಿರಂಗಿ ಗುಂಡಿನ ದಾಳಿಗಳು ಹಳ್ಳಿಗಳ ಬಳಿ ಅಪಾಯಕಾರಿಯಾಗಿ ಬಿದ್ದವು. ಈ ಕೃತ್ಯವನ್ನು ಸ್ಪಷ್ಟ ಕದನ ವಿರಾಮ ಉಲ್ಲಂಘನೆ ಮತ್ತು ಉದ್ದೇಶಪೂರ್ವಕ ಪ್ರಚೋದನೆ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.
ದಾಳಿಯಲ್ಲಿ ಮಾರಣಾಂತಿಕವಾಗಿ ಗಾಯಗೊಂಡ ಯೋಧ ಮುಂಚೂಣಿಯ ಸ್ಥಾನಗಳಲ್ಲಿ ಸಕ್ರಿಯ ಕರ್ತವ್ಯದಲ್ಲಿದ್ದರು. ಶರ್ಮಾ ಕೊನೆಯವರೆಗೂ ಧೈರ್ಯದಿಂದ ಹೋರಾಡಿ ಆಕ್ರಮಣದ ವಿರುದ್ಧ ದೇಶದ ಗಡಿಯನ್ನು ರಕ್ಷಿಸಿದರು. ಅಧಿಕೃತ ಹೇಳಿಕೆಯಲ್ಲಿ ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ಸಾವುನೋವನ್ನು ದೃಢಪಡಿಸಿದೆ.
ಮಾಜಿ ಯೋಧನ ಮನೆಗೆ ಬಡಿದ ಶೆಲ್
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯಲ್ಲಿರುವ ಮಾಜಿ ಸೇನಾ ಕಮಾಂಡೋ ಹವಾಲ್ದಾರ್ ಮೊಹಮ್ಮದ್ ಖಾನ್ ಅವರ ಮಗೆ ಪಾಕಿಸ್ಥಾನ ಸಿಡಿಸಿದ ಫಿರಂಗಿ ಶೆಲ್ ಬಡಿದು ಹಾನಿಯಾಗಿದೆ.
ಮೊದಲು ಸ್ವಲ್ಪ ಗುಂಡಿನ ಚಕಮಕಿ ನಡೆಯಿತು. ಅದು ಬೆಳಗಿನ ಜಾವ 1 ಗಂಟೆಗೆ ಪ್ರಾರಂಭವಾಯಿತು. ಮೊದಲಿಗೆ ದೂರದಿಂದ ದಾಳಿ ನಡೆದಂತಿತ್ತು. ನಂತರ, ಬೆಳಗಿನ ಜಾವ 2.30ರ ಹೊತ್ತಿಗೆ ಅದು ಜೋರಾಗಿ ಫಿರಂಗಿ ಗುಂಡಿನ ದಾಳಿ ಪ್ರಾರಂಭವಾಯಿತು ಎಂದು ಹವಿಲ್ದಾರ್ ಘಟನೆ ಬಗ್ಗೆ ತಿಳಿಸಿದ್ದಾರೆ.
ನನ್ನ ಮನೆ ಹಾನಿಗೊಳಗಾದಾಗ ನಾನು ನನ್ನ ಮಕ್ಕಳು ಮತ್ತು ಹೆಂಡತಿಯನ್ನು ಕರೆದುಕೊಂಡು ಹೊರಗೆ ಬಂದೆ. ಗುಂಡಿನ ದಾಳಿ ಇನ್ನೂ ನಡೆಯುತ್ತಿದೆ ಎಂದು ನನಗೆ ತಿಳಿದಿತ್ತು. ಆದ್ದರಿಂದ ಸುರಕ್ಷಿತವಾಗಿರಲು ನೆಲದ ಮೇಲೆ ಮಲಗಲು ನಾನು ಅವರಿಗೆ ಹೇಳಿದೆ. ನಾನು ಕೂಡ ಮಲಗಿದೆ ಎಂದು ವಿವರಿಸಿದ್ದಾರೆ.