ದಿಢೀರ್ ವಿದಾಯ ಹೇಳಿದ ಹಿಂದೆ ನಾನಾ ಅನುಮಾನ
ನವದೆಹಲಿ: ಭಾರತ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ ನಿನ್ನೆ ರಾತ್ರಿ ದಿಢೀರ್ ಎಂದು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ಅಚ್ಚರಿಯುಂಟು ಮಾಡಿದ್ದಾರೆ. ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ಎರಡೆರಡು ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದ ರೋಹಿತ್ ಶರ್ಮಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ದೀರ್ಘ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದರೆ ಇದು ರೋಹಿತ್ ಶರ್ಮಾ ಇಷ್ಟಪಟ್ಟು ಹೇಳಿದ ಗುಡ್‌ಬೈ ಅಲ್ಲ, ಅವರು hurt and retired ಆಗಿದ್ದಾರೆ ಎಂಬ ಮಾತು ಅಭಿಮಾನಗಳಿಂದ ಕೇಳಿಬರುತ್ತಿದೆ.
ವಾಸ್ತವವಾಗಿ ಆಯ್ಕೆ ಸಮಿತಿಯು ರೋಹಿತ್ ಶರ್ಮಾ ಅವರನ್ನು ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಸಲು ನಿರ್ಧರಿಸಿದೆ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ ರೋಹಿತ್ ಶರ್ಮಾ ಈ ಮಾದರಿಗೆ ವಿದಾಯ ಹೇಳಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ರೋಹಿತ್ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಟೆಸ್ಟ್ ಕ್ಯಾಪ್ ಸಂಖ್ಯೆ 280ರ ಫೋಟೋವನ್ನು ಹಂಚಿಕೊಂಡು ಇದರೊಂದಿಗೆ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ. ನಾನು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದು ನಿಮಗೆಲ್ಲರಿಗೂ ಹೇಳಲು ಬಯಸುತ್ತೇನೆ. ನನ್ನ ದೇಶವನ್ನು ಬಿಳಿ ಬಟ್ಟೆ ಧರಿಸಿ ಪ್ರತಿನಿಧಿಸುವುದು ನನಗೆ ದೊಡ್ಡ ಗೌರವವಾಗಿದೆ. ಇಷ್ಟು ವರ್ಷಗಳ ಕಾಲ ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ಏಕದಿನ ಮಾದರಿಯಲ್ಲಿ ದೇಶವನ್ನು ಪ್ರತಿನಿಧಿಸುವುದನ್ನು ಮುಂದುವರೆಸುತ್ತೇನೆ ಎಂದು ರೋಹಿತ್ ಬರೆದುಕೊಂಡಿದ್ದಾರೆ.
ಅತಂತ್ರವಾಗಿದ್ದ ಟೆಸ್ಟ್ ಬದುಕು
ಕಳೆದ ಕೆಲವು ತಿಂಗಳುಗಳಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಕಳೆದ ವರ್ಷ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲೇ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮುಖಭಂಗಕ್ಕೊಳಗಾಗಿತ್ತು. ಆ ನಂತರ ಆಸ್ಟ್ರೇಲಿಯಾ ಪ್ರವಾಸದಲ್ಲಿಯೂ ಹೀನಾಯ ಪ್ರದರ್ಶನ ನೀಡಿತ್ತು. ಈ ಎರಡು ಸೋಲುಗಳು ತಂಡವನ್ನು ಡಬ್ಲ್ಯುಟಿಸಿ ಫೈನಲ್ನಿಂದ ಹೊರಹಾಕಿತ್ತು. ಅಂದಿನಿಂದ ರೋಹಿತ್ರನ್ನು ಟೆಸ್ಟ್ ತಂಡದಿಂದ ಹೊರಗಿಡುವ ಜೊತೆಗೆ ಅವರನ್ನು ನಾಯಕತ್ವದಿಂದಲೂ ಕೆಳಗಿಳಿಸಬೇಕು ಎಂಬು ಕೂಗು ಜೋರಾಗಿ ಕೇಳಿಬರುತ್ತಿತ್ತು.
ಆದರೆ ರೋಹಿತ್ ನಾಯಕತ್ವದಲ್ಲಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ರೋಹಿತ್ ಇಂಗ್ಲೆಂಡ್ ಪ್ರವಾಸದಲ್ಲೂ ತಂಡವನ್ನು ಮುನ್ನಡೆಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಮೇ 6ರಂದು ಆಯ್ಕೆ ಸಮಿತಿಯು ರೋಹಿತ್ ಅವರನ್ನು ನಾಯಕತ್ವದಿಂದ ತೆಗೆದುಹಾಕಲು ನಿರ್ಧರಿಸಿದ್ದು, ಅದರ ಬಗ್ಗೆ ಬಿಸಿಸಿಐಗೂ ತಿಳಿಸಲಾಗಿದೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ರೋಹಿತ್ ನಿವೃತ್ತಿ ಘೋಷಿಸಿದ್ದಾರೆ.
2013 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ರೋಹಿತ್, ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ್ದರು. ಮುಂದಿನ ಟೆಸ್ಟ್‌ನಲ್ಲೂ ಶತಕ ಗಳಿಸುವ ಮೂಲಕ ಅವರು ವಿಶೇಷ ಸಾಧನೆ ಮಾಡಿದ್ದರು. ಆದರೂ ಮುಂದಿನ 6 ವರ್ಷಗಳ ಕಾಲ ಈ ಸ್ವರೂಪದಲ್ಲಿ ರೋಹಿತ್ಗೆ ಖಾಯಂ ಸ್ಥಾನ ಎಂಬುದು ಇರಲಿಲ್ಲ. ಆದರೆ 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ, ರೋಹಿತ್ ಅವರನ್ನು ಈ ಸ್ವರೂಪದಲ್ಲಿ ಮೊದಲ ಬಾರಿಗೆ ಆರಂಭಿಕ ಆಟಗಾರನನ್ನಾಗಿ ಕಣಕ್ಕಿಳಿಸಲಾಯಿತು. ಇಲ್ಲಿಂದ ಅವರ ವೃತ್ತಿಜೀವನ ಬದಲಾಯಿತು.
ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ್ದ ರೋಹಿತ್, ಮೂರನೇ ಟೆಸ್ಟ್‌ನಲ್ಲಿಯೂ ದ್ವಿಶತಕ ಸಿಡಿಸಿದ್ದರು. ಅಂದಿನಿಂದ, ರೋಹಿತ್ ತಂಡದ ಆರಂಭಿಕ ಆಟಗಾರರಾಗಿ ಅನೇಕ ಅತ್ಯುತ್ತಮ ಇನ್ನಿಂಗ್ಸ್‌ಗಳನ್ನು ಆಡಿದ್ದರು. ನಂತರ 2022ರಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ ನಂತರ, ರೋಹಿತ್ ಅವರನ್ನು ಟೀಂ ಇಂಡಿಯಾದ ನಾಯಕರನ್ನಾಗಿ ನೇಮಿಲಾಯಿತು. ರೋಹಿತ್ ಒಟ್ಟು 67 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 4301 ರನ್ ಗಳಿಸಿದ್ದಾರೆ. ಅವರು 40.57 ರ ಸರಾಸರಿಯಲ್ಲಿ ರನ್ ಗಳಿಸಿರುವ ರೋಹಿತ್ 12 ಶತಕ ಮತ್ತು 18 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಹಾಗೆಯೇ ಬೌಲಿಂಗ್ನಲ್ಲಿ 2 ವಿಕೆಟ್‌ಗಳನ್ನು ಪಡೆದಿದ್ದಾರೆ.