ಪುತ್ತೂರು: ಅಜ್ಞಾನ ನಮ್ಮನ್ನು ಪಾತಾಳಕ್ಕೆ ತಳ್ಳುತ್ತದೆ. ಅದನ್ನು ನಾವು ಹೋಗಲಾಡಿಸಿ ನಮ್ಮನ್ನು ನಾವು ಸುಜ್ಞಾನದೆಡೆಗೆ ಕೊಂಡೊಯ್ಯಬೇಕು. ಅದಕ್ಕಾಗಿ ಅತಿ ಹೆಚ್ಚು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಮಹಿಳೆಯರಿಗೆ ಸರಿಯಾದ ಸ್ಥಾನಮಾನ ಗೌರವ ದೊರಕಬೇಕು. ಹೆಣ್ಣಿಗೆ ಪ್ರಾಧಾನ್ಯತೆ ನೀಡದಿದ್ದಲ್ಲಿ ಪ್ರಪಂಚ ನೆಲೆ ನಿಲ್ಲಲು ಸಾಧ್ಯವಿಲ್ಲ ಇದಕ್ಕೆ ನಮ್ಮ ಪುರಾಣಗಳೇ ಪ್ರತ್ಯಕ್ಷ ಸಾಕ್ಷಿ ಎಂದು ಡಾ.ಅನಿಲಾ ದೀಪಕ್ ಶೆಟ್ಟಿ ಹೇಳಿದರು.
ವಿವೇಕಾನಂದ ಮಹಾವಿದ್ಯಾಲಯ ಕಲಾ, ವಿಜ್ಞಾನ, ವಾಣಿಜ್ಯ (ಸ್ವಾಯತ್ತ) ಇಲ್ಲಿನ ಸಮಾಜಶಾಸ್ತ್ರ ವಿಭಾಗ, ಐಕ್ಯೂಎಸಿ ಘಟಕ, ಮಹಿಳಾ ಕೋಶ ಕುಂದುಕೊರತೆ ಮೇಲ್ಮನವಿ ಸಮಿತಿ ಮತ್ತು ಲೈಂಗಿಕ ಕಿರುಕುಳ ತಡೆ ಸಮಿತಿ ಸಹಯೋಗದಲ್ಲಿ ‘ಯುವಜನತೆಯ ವರ್ತನೆಯಲ್ಲಿ ಬದಲಾವಣೆ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
1975 ರಲ್ಲಿ ಮಾರ್ಚ್ ೮ನ್ನು ವಿಶ್ವ ಸಂಸ್ಥೆಯು ಮಹಿಳಾ ದಿನಾಚರಣೆಯನ್ನಾಗಿ ಘೋಷಿಸಿತು. ಈ ಮೂಲಕ ಮಹಿಳೆಯರಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯವನ್ನು ನೀಡಿತು. ಮಹಿಳೆಯರು ಎಲ್ಲೇ ಹೋದರು ತಮ್ಮ ಶಕ್ತಿಯನ್ನು ಕಳೆದುಕೊಳ್ಳದೆ ಬದುಕುವ ಧೈರ್ಯವನ್ನು ಹೊಂದಿರಬೇಕು ಎಂದು ಹೇಳಿದರು.
ಕಾಲೇಜಿನ ಭೌತ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎನ್ ನರಸಿಂಹ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರಿಗೆ ಬಹಳ ಸಾಮರ್ಥ್ಯವಿದೆ. ಪಠ್ಯದ ಜೊತೆ ಜೊತಗೆ ಪಠ್ಯೇತರ ಚಟುವಟಿಕೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದರು.
ವೇದಿಕೆಯಲ್ಲಿ ಮಹಿಳಾ ಕೋಶದ ಸಂಯೋಜಕಿ ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್ ಹಾಗೂ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಅನಿತಾ ಕಾಮತ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶಿವಾನಿ.ಟಿ ಸ್ವಾಗತಿಸಿ, ವಿದ್ಯಾರ್ಥಿ ಅಕ್ಷಯ್ ಆರ್ ವಂದಿಸಿದರು. ವಿದ್ಯಾರ್ಥಿಗಳಾದ ಶ್ರೇಯ ಎಂ ಹಾಗೂ ಪ್ರಜ್ಞಾ ಜೆ ಪ್ರಾರ್ಥಿಸಿದರು. ದೇವಯಾನಿ.ಎಂ ಕಾರ್ಯಕ್ರಮ ನಿರೂಪಿಸಿದರು.