ಪಹಲ್ಗಾಮ್ ದಾಳಿ ಕುರಿತು ಕಠಿಣ ಪ್ರಶ್ನೆಗಳನ್ನು ಕೇಳಿ ಛೀಮಾರಿ
ಹೊಸದಿಲ್ಲಿ: ಪಹಲ್ಗಾಮ್ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಉಂಟಾಗಿರುವ ಪ್ರಕ್ಷುಬ್ಧ ಸ್ಥಿತಿಯನ್ನು ವಿಶ್ವಸಂಸ್ಥೆಗೆ ಒಯ್ದು ಬಚವಾಗಲು ಯತ್ನಿಸಿದ್ದ ಕಂತ್ರಿ ಪಾಕಿಸ್ಥಾನಕ್ಕೆ ದೊಡ್ಡಮಟ್ಟದಲ್ಲಿ ಮುಖಭಂಗವಾಗಿದೆ. ಪಾಕಿಸ್ಥಾನದ ಒತ್ತಾಯದ ಮೇರೆಗೆ ಇಂದು ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ರಹಸ್ಯ ಸಮಾಲೋಚನಾ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಂಡಿಲ್ಲ.
ಆದರೆ ಇದೇ ವೇಳೆ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ಥಾನಕ್ಕೆ ವಿಶ್ವಸಂಸ್ಥೆ ಕಠಿಣ ಪ್ರಶ್ನೆಗಳನ್ನು ಕೇಳಿ ಛೀಮಾರಿ ಹಾಕಿದೆ. ಮೇ ತಿಂಗಳಿನ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷರಾಗಿರುವ ಗ್ರೀಸ್ ಖಾಯಂ ಸದಸ್ಯ ರಾಷ್ಟ್ರವಲ್ಲದ ಪಾಕಿಸ್ಥಾನದ ವಿನಂತಿಯ ಮೇರೆಗೆ ಸಭೆಯನ್ನು ನಿಗದಿಪಡಿಸಿದ್ದರು.
ಪಹಲ್ಗಾಮ್ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಹಲವು ಭಯೋತ್ಪಾದಕ ದಾಳಿಗಳು ಪಾಕಿಸ್ಥಾನದಲ್ಲಿರುವ ಲಷ್ಕರ್ ಎ ತೊಯ್ಬಾದಂಥ ಉಗ್ರ ಸಂಘಟನೆಗಳ ಕೃತ್ಯವಾಗಿದ್ದು, ಇದರ ಹೊಣೆಯನ್ನು ಪಾಕಿಸ್ಥಾನ ಹೊರಬೇಕು ಎಂದು ವಿಶ್ವಸಂಸ್ಥೆ ಹೇಳಿದೆ.
ರಾಜಕೀಯ ಮತ್ತು ಶಾಂತಿ ಕಾರ್ಯಾಚರಣೆಗಳ ಇಲಾಖೆಗಳಲ್ಲಿ ಮಧ್ಯಪ್ರಾಚ್ಯ, ಏಷ್ಯಾ ಮತ್ತು ಪೆಸಿಫಿಕ್‌ನ ಸಹಾಯಕ ಪ್ರಧಾನ ಕಾರ್ಯದರ್ಶಿ ಟುನೀಶಿಯಾದ ಖಲೀದ್ ಮೊಹಮ್ಮದ್ ಖಿಯಾರಿ ಎರಡೂ ಇಲಾಖೆಗಳ (ಡಿಪಿಪಿಎ ಮತ್ತು ಡಿಪಿಒ) ಪರವಾಗಿ ಮಂಡಳಿಗೆ ಪರಿಸ್ಥಿತಿಯನ್ನು ವಿವರಿಸಿದರು. ಸಭೆಯಿಂದ ಹೊರಬಂದ ಖಿಯಾರಿ ಸಂವಾದ ಮತ್ತು ಸಂಘರ್ಷ ರಹಿತ ಶಾಂತಿಯುತ ಪರಿಹಾರಕ್ಕಾಗಿ ಕರೆ ನೀಡಲಾಗಿದೆ ಎಂದಷ್ಟೇ ಹೇಳಿದ್ದು, ಯಾವುದೇ ನಿರ್ಣಯ ಕೈಗೊಂಡ ಬಗ್ಗೆ ಮಾತನಾಡಿಲ್ಲ.
15 ರಾಷ್ಟ್ರಗಳ ಭದ್ರತಾ ಮಂಡಳಿಯ ಸದಸ್ಯರು ಪಾಕಿಸ್ಥಾನಕ್ಕೆ ಕಠಿಣ ಪ್ರಶ್ನೆಗಳನ್ನು ಕೇಳಿದ್ದಾರೆ. ಭಾರತದೊಂದಿಗೆ ದ್ವಿಪಕ್ಷೀಯವಾಗಿ ಸಮಸ್ಯೆಗಳನ್ನು ಬಗೆಹರಿಸಲು ಸೂಚಿಸಲಾಗಿದೆ. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಮುಚ್ಚಿದ ಬಾಗಿಲಿನ ಸಭೆಯು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕೊಠಡಿಯಲ್ಲಿ ನಡೆಯಲಿಲ್ಲ, ಬದಲಾಗಿ ಅದರ ಪಕ್ಕದ ಸಮಾಲೋಚನಾ ಕೊಠಡಿಯಲ್ಲಿ ನಡೆಯಿತು.
ಪಾಕಿಸ್ಥಾನದ ಕ್ಷಿಪಣಿ ಪರೀಕ್ಷೆಗಳು ಮತ್ತು ಪರಮಾಣು ಕುರಿತಾದ ಹೇಳಿಕೆಗಳು ಉದ್ವಿಗ್ನತೆಯನ್ನು ಹೆಚ್ಚಿಸುವ ಅಂಶಗಳಾಗಿವೆ ಎಂದು ಅನೇಕ ಸದಸ್ಯರು ಕಳವಳ ವ್ಯಕ್ತಪಡಿಸಿದರು. ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನದ ಖಾಯಂ ಪ್ರತಿನಿಧಿ ರಾಯಭಾರಿ ಅಸಿಮ್ ಇಫ್ತಿಕರ್ ಅಹ್ಮದ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಭೆಯಲ್ಲಿ ದೇಶದ ಉದ್ದೇಶಗಳನ್ನು ಹೆಚ್ಚಾಗಿ ಮುಂದಿಡಲಾಗಿದೆ ಎಂದರು.