ಸುಹಾಸ್ ಶೆಟ್ಟಿ ಹತ್ಯೆ ಹಿನ್ನೆಲೆಯಲ್ಲಿ ವಾಟ್ಸಾಪ್ ಗ್ರೂಪ್‌ನಲ್ಲಿ ಪೋಸ್ಟ್
ಮಂಗಳೂರು: ಬಜ್ಪೆ ಸಮೀಪ ಕಿನ್ನಿಪದವು ಬಳಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸಾಪ್ ಗ್ರೂಪ್‌ನಲ್ಲಿ ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆ ಉಂಟುಮಾಡುವ ಪೋಸ್ಟ್ ಮಾಡಿದ ಪುತ್ತೂರಿನ ಯುವಕನ ವಿರುದ್ಧ ಮಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪುತ್ತೂರಿನ ಮನೀಷ್ ಎಂಬಾತ ವಾಟ್ಸಾಪ್ ಗ್ರೂಪ್‌ನಲ್ಲಿ ಮಹೇಶ್ ಎಸ್. ಎಂಬ ಹೆಸರಿನಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಿದ್ದ. ಆತನನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಲಾಗಿದೆ.
ಮನೀಷ್ ಎಂಬಾತ ವಾಟ್ಸಾಪ್ ಗ್ರೂಪ್‌ನಲ್ಲಿ ನಮ್ಮ ಕಾರ್ಯಕರ್ತನಾದ ಸುಹಾಸ್ ಹತ್ಯೆಯನ್ನು ಖಂಡಿಸಿ ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದ.ಕ. ಜಿಲ್ಲೆ ಸಂರ್ಪೂರ್ಣ ಬಂದ್. ಸುಹಾಸ್ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ನಮ್ಮ ಬಲವನ್ನು ಈಗ ತೋರಿಸದೇ ಇದ್ದಲ್ಲಿ ಮುಂದೊಂದು ದಿನ ನಾವೇ ಇರುವುದಿಲ್ಲ. ಹಿಂದೂ ಸಾಗರದ ಬಿಂದು ಬಿಂದುಗಳೇ ಒಟ್ಟಾಗೋಣ, ಬಲಿದಾನ ವ್ಯರ್ಥವಾಗದಿರಲಿ ಎಂಬುದಾಗಿ ಪೋಸ್ಟ್ ಮಾಡಿದ್ದ. ಈ ಪ್ರಚೋದನಕಾರಿ ಪೋಸ್ಟ್‌ನ ಆಧಾರದಲ್ಲಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ 192 ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ಮುಂದಿನ ತನಿಖೆಯ ಸಲುವಾಗಿ ಮಂಗಳೂರು ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.