ವಿದೇಶದಿಂದಲೂ ಬಂದಿದೆ ಹಣ; ಸ್ಥಳೀಯ ಪ್ರಭಾವಿಗಳಿಂದ ಹಣಕಾಸಿನ ನೆರವು
ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗಾಗಿ ಲಕ್ಷಾಂತರ ರೂಪಾಯಿ ಫಂಡಿಂಗ್ ಆಗಿದೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಪ್ರತೀಕಾರಕ್ಕೆ ನಡೆದ ಈ ಹತ್ಯೆಯ ಹಿಂದೆ ಲಕ್ಷಾಂತರ ರೂ. ಹಣ ಹರಿದಾಡಿದೆ. ಕೇವಲ ಐದು ಲಕ್ಷಕ್ಕಾಗಿ ಮಾತ್ರ ಈ ಹತ್ಯೆ ನಡೆದಿಲ್ಲ ಎನ್ನುವ ಸ್ಪೋಟಕ ಮಾಹಿತಿ ತನಿಖೆ ವೇಳೆ ತಿಳಿದುಬಂದಿದೆ.
ಸುರತ್ಕಲ್ ಕಾಟಿಪಳ್ಳದ ಫಾಝಿಲ್ ಹತ್ಯೆಯ ಪ್ರತೀಕಾರಕ್ಕಾಗಿ ಸುಹಾಸ್ ಶೆಟ್ಟಿಯನ್ನು ಗುರಿ ಮಾಡಿಕೊಳ್ಳಲಾಗಿತ್ತು. ಸ್ಥಳೀಯ ಕೆಲವು ಪ್ರಭಾವಿ ಮುಸ್ಲಿಮರು ಫಾಝಿಲ್ ಸಹೋದರನಿಗೆ ನೆರವು ನೀಡಿದ್ದಾರೆ. ಲಕ್ಷಾಂತರ ರೂಪಾಯಿ ಫಂಡಿಂಗ್ ಆಗಿದೆ ಎಂಬ ಮಾಹಿತಿ ಸಿಕ್ಕಿದ್ದು, ಪೊಲೀಸರು ಹಲವು ಬ್ಯಾಂಕ್ ಖಾತೆಗಳ ಪರಿಶೀಲನೆಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫಾಝಿಲ್ ತಮ್ಮ ಆದಿಲ್ ಮೆಹರೂಫ್ ನೀಡಿದ ಸುಪಾರಿಯಂತೆ ಈ ಹತ್ಯೆ ನಡೆದಿದೆ. ಬಜಪೆಯ ಸಫ್ವಾನ್ ಗ್ಯಾಂಗ್ ಹತ್ಯೆ ನಡೆಸಿದೆ. ಸಫ್ವಾನ್‌ಗೆ ಆದಿಲ್ 5 ಲಕ್ಷ ರೂ. ಸುಪಾರಿ ನೀಡಿ ಅದರಲ್ಲಿ 3 ಲಕ್ಷ ರೂ. ಮುಂಗಡ ಪಾವತಿಸಿದ್ದ. ಇನ್ನುಳಿದ 2 ಲಕ್ಷ ರೂ. ಕೆಲಸ ಮುಗಿಸಿದ ಮೇಲೆ ನೀಡುವುದಾಗಿ ಹೇಳಿದ್ದ ಎಂದು ಬಂಧನದ ಬಳಿಕ ಆರೋಪಿಗಳು ಬಾಯ್ಬಿಟ್ಟಿದ್ದರು.
ಫಾಝಿಲ್ ಹತ್ಯೆಯನ್ನು ಅರಗಿಸಿಕೊಳ್ಳಲಾಗದ ಮುಸ್ಲಿಮರು ಪ್ರತೀಕಾರಕ್ಕಾಗಿ ಪಣ ತೊಟ್ಟಿದ್ದರು. ಪ್ರತೀಕಾರ ತೀರಿಸುವ ಯಾರಿಗಾದರೂ ಎಷ್ಟೇ ಹಣ ನೀಡಬೇಕಾದರೂ ನೀಡಲು ಸಿದ್ದರಿದ್ದರು. ಹತ್ಯೆ ನಡೆಸುವವರಿಗೆ ಫಂಡಿಂಗ್ ಮಾಡಲು ಸಾಕಷ್ಟು ಜನ ಮುಂದೆ ಬಂದಿದ್ದರು. ಸುಹಾಸ್ ಹತ್ಯೆಯ ಪ್ಲಾನ್ ನಡೆಸುವ ವೇಳೆಯೇ 50 ಲಕ್ಷ ರೂ. ಹೆಚ್ಚು ಹಣ ಸಂಗ್ರಹವಾಗಿದೆ ಎಂಬ ಸ್ಫೋಟಕ ಮಾಹಿತಿ ತನಿಖೆ ವೇಳೆ ಬಹಿರಂಗಗೊಂಡಿದೆ.
ಎಲ್ಲ ಆರೋಪಿಗಳನ್ನು 14 ದಿನ ಪೊಲೀಸ್ ಕಸ್ಟಡಿಗೆ ಪಡೆದಿರುವ ತನಿಖಾಧಿಕಾರಿಗೆ ಲಕ್ಷ ಲಕ್ಷ ಫಂಡಿಂಗ್ ಆಗಿರುವ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿದೆ. ಹೀಗಾಗಿ ವಿವಿಧ ಬ್ಯಾಂಕ್ ಖಾತೆಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು ವಿದೇಶದಿಂದಲೂ ಭಾರಿ ಪ್ರಮಾಣದಲ್ಲಿ ಫಂಡಿಂಗ್ ಆಗಿರುವ ವಿಚಾರ ಬೆಳಕಿಗೆ ಬಂದಿದೆ.
ಸುಹಾಸ್ ಶೆಟ್ಟಿ ಹತ್ಯೆಯ ಆರೋಪಿಗಳ ಬಂಧನದ ಬಳಿಕ ಕೇವಲ 5 ಲಕ್ಷ ರೂ. ಸುಪಾರಿ ನೀಡಲಾಗಿತ್ತು ಎನ್ನುವುದು ಹೇಳಿದಾಗ ಅನೇಕ ಮಂದಿ ಅನುಮಾನ ವ್ಯಕ್ತಪಡಿಸಿದ್ದರು. ಬೊಲೆರೋ ಪಿಕಪ್ ಮತ್ತು ಸ್ವಿಫ್ಟ್ ಕಾರಿನ ಮೌಲ್ಯವೇ 10 ಲಕ್ಷ ರೂಗಿಂತಲೂ ಅಧಿಕ ಆಗುತ್ತದೆ. ಕೇವಲ 5 ಲಕ್ಷ ರೂ.ಗೆ ಈ ಹತ್ಯೆ ನಡೆದಿರುವ ಸಾಧ್ಯತೆ ಇಲ್ಲ ಎಂದು ಜನ ಅನುಮಾನ ವ್ಯಕ್ತಪಡಿಸಿದ್ದರು. ಈ ಅನುಮಾನ ನಿಜವಾಗಿದ್ದು ತನಿಖೆಯ ವೇಳೆ ಲಕ್ಷ ಲಕ್ಷ ಫಂಡಿಂಗ್ ಆಗಿರುವುದು ಬೆಳಕಿಗೆ ಬಂದಿದೆ.