ಚಿಕ್ಕಮಗಳೂರು : ಕಾಶ್ಮೀರದ ಪಹಲ್ಗಾಮ್ನಲ್ಲಿ ಹಿಂದುಗಳ ಮಾರಣಹೋಮ ಮತ್ತು ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸೋಮವಾರ ಚಿಕ್ಕಮಗಳೂರು ಬಂದ್‌ಗೆ ಕರೆನೀಡಿದೆ. ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಚಿಕ್ಕಮಗಳೂರು ನಗರ ಸೇರಿದಂತೆ 9 ತಾಲೂಕುಗಳಲ್ಲಿ ಬಂದ್ ಮಾಡಲು ನಿರ್ಧರಿಸಲಾಗಿದೆ. ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡುವಂತೆ ಹಿಂದೂ ಸಂಘಟನೆಗಳು ಮನವಿ ಮಾಡಿವೆ.
ಸರ್ಕಾರಿ ಬಸ್ ಸೇರಿದಂತೆ ಸಾರಿಗೆ ಸಂಚಾರಕ್ಕೆ ಯಾವುದೇ ಅಡ್ಡಿ ಮಾಡುವುದಿಲ್ಲ. ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು, ಹೋಟೆಲ್ ಬಂದ್ ಮಾಡಲು ಮನವಿ ಮಾಡಿರುವುದಾಗಿ ಬಜರಂಗ ದಳ ಜಿಲ್ಲಾ ಕಾರ್ಯದರ್ಶಿ ರಂಗನಾಥ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಸದ್ಯ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಹಿಂದೂಗಳು ಸೇರಿದಂತೆ 8 ಜನರನ್ನು ಬಂಧಿಸಲಾಗಿದೆ. ಬಂಧಿತ ಹಿಂದೂ ಯುವಕರಾದ ನಾಗರಾಜ್ ಮತ್ತು ರಂಜಿತ್ ಚಿಕ್ಕಮಗಳೂರು ಜಿಲ್ಲೆಯ ಕಳಸದವರಾಗಿದ್ದು, ಹೀಗಾಗಿ ಈ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯ ನಂಟು ಹೊಂದಿದೆ.
ಹೀಗಾಗಿ ಚಿಕ್ಕಮಗಳೂರಿನಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ದಕ್ಷಿಣ ಕನ್ನಡದಿಂದ ಬರುವ ಪ್ರತಿ ವಾಹನದ ಮೇಲೆ ಕಣ್ಣಿಟ್ಟಿದ್ದು, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಚಾರ್ಮಾಡಿ ಘಾಟಿ ಮಾರ್ಗವಾಗಿ ಬರುವ ಪ್ರತಿ ವಾಹನವನ್ನು ತಪಾಸಣೆ ನಡೆಸುತ್ತಿದ್ದಾರೆ.
ದಿನದ 24 ಗಂಟೆ ಕೊಟ್ಟಿಗೆಹಾರ ಚೆಕ್ಪೋಸ್ಟ್ನಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದು, ಜಿಲ್ಲೆಗೆ ಬರುವ ಮತ್ತು ಹೊರ ಹೋಗುವ ಪ್ರತಿಯೊಬ್ಬರ ಮೇಲೂ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. ಕೋಮು ಸೂಕ್ಷ್ಮ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಹೈ ಅಲರ್ಟ್ ಆಗಿದ್ದಾರೆ.