ಆರೋಪಿಗಳ ರಕ್ಷಣೆಗೆ ಸ್ಪೀಕರ್ ನಿಂತಿದ್ದಾರೆ ಎಂದು ಆರೋಪ; ಹಾಗೇ ಹೇಳಿಲ್ಲ ಎಂದು ಖಾದರ್ ಸ್ಪಷ್ಟನೆ
ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ಸ್ಪೀಕರ್ ಯು.ಟಿ.ಖಾದರ್ ನೀಡಿದ ಹೇಳಿಕೆಯೊಂದು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಕೊಲೆ ಪ್ರಕರಣದ ದಿಕ್ಕು ತಪ್ಪಿಸಲು ಸ್ವತಃ ಸ್ಪೀಕರ್ ಮುಂದಾಗಿರುವುದು ದುರದೃಷ್ಟಕರ, ಅವರು ರಾಜೀನಾಮೆ ನೀಡಬೇಕೆಂದು ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ.
ಸುಹಾಸ್ ಶೆಟ್ಟಿ ಹತ್ಯೆಗೂ ಮೂರು ವರ್ಷದ ಹಿಂದೆ ಸುರತ್ಕಲ್‌ನಲ್ಲಿ ಹತ್ಯೆಯಾದ ಫಾಝಿಲ್ ಕುಟುಂಬಕ್ಕೂ ಯಾವುದೇ ಸಂಬಂಧ ಇಲ್ಲ, ಫಾಝಿಲ್ ಕುಟುಂಬದವರೊಂದಿಗೆ ನಾನು ಮಾತನಾಡಿದ್ದೇನೆ. ಅವರು ಈ ಹತ್ಯೆಯಲ್ಲಿ ನಮ್ಮ ಪಾತ್ರವಿಲ್ಲ ಎಂದು ಸ್ಫಷ್ಟಪಡಿಸಿದ್ದಾರೆ ಎಂಬುದಾಗಿ ಖಾದರ್ ಮಾಧ್ಯಮದವರ ಬಳಿ ಹೇಳಿಕೊಂಡಿದ್ದರು.
ಆದರೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ ಎಂಟು ಆರೋಪಿಗಳ ಪೈಕಿ ಫಾಝಿಲ್‌ನ ಸಹೋದರನೂ ಇದ್ದಾನೆ. ಈತನೇ ಹತ್ಯೆಗೆ 5 ಲ.ರೂ. ನೀಡುವುದಾಗಿ ಹೇಳಿದ್ದ ಹಾಗೂ 3 ಲ.ರೂ. ಈಗಾಗಲೇ ಮುಖ್ಯ ಆರೋಪಿಗೆ ಕೊಟ್ಟಿದ್ದಾನೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಹೀಗೆ ತದ್ವಿರುದ್ಧ ಹೇಳಿಕೆ ನೀಡಿರುವುದು ಖಾದರ್‌ಗೆ ಮುಳುವಾಗಿದೆ. ಶಾಸಕರಾದ ಭರತ್ ಶೆಟ್ಟಿ, ಸುನಿಲ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮತ್ತಿತರರು ಖಾದರ್ ಹೇಳಿಕೆಯನ್ನು ಖಂಡಿಸಿ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸುವುದಕ್ಕೂ ಮೊದಲು ಖಾದರ್ ಅವರ ರಕ್ಷಣೆಗೆ ನಿಂತಿರುವುದು ನಾಚಿಕೆಗೇಡು ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಖಾದರ್ ಸ್ಪಷ್ಟೀಕರಣ
ತನ್ನ ಹೇಳಿಕೆ ವಿವಾದವಾದ ಬೆನ್ನಿಗೆ ಸ್ಪಷ್ಟೀಕರಣ ನೀಡಿರುವ ಖಾದರ್ ಮಾಧ್ಯಮಗಳ ಜೊತೆಗೆ ಮಾತನಾಡುವ ವೇಳೆ ಸುಹಾಸ್ ಶೆಟ್ಟಿ ಹತ್ಯೆ ರೌಡಿಗಳ ನಡುವಿನ ಗ್ಯಾಂಗ್‌ವಾರ್ ಆಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದೆ. ಆರೋಪಿಗಳ ಬಂಧನವಾದ ಬಳಿಕ ಸತ್ಯಾಸತ್ಯತೆ ಹೊರಬರುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದೆ. ಸುಹಾಸ್ ಹತ್ಯೆಯಾದ ಬೆನ್ನಿಗೆ ಇದು ಫಾಜಿಲ್ ಹತ್ಯೆಗೆ ಪ್ರತೀಕಾರ ಎಂಬ ಸುದ್ದಿ ಹಬ್ಬತೊಡಗಿದಾಗ ಫಾಝಿಲ್ ತಂದೆ ನನಗೆ ಫೋನ್ ಮಾಡಿ ಹತ್ಯೆಯಲ್ಲಿ ನಮ್ಮ ಪಾತ್ರ ಇಲ್ಲ ಎಂದಿರುವುದನ್ನು ಮಾಧ್ಯಮದವರಿಗೆ ತಿಳಿಸಿದ್ದೇನೆಯೇ ಈ ಹೊರತು ಈ ಕೃತ್ಯದಲ್ಲಿ ಅವರ ಪಾತ್ರವಿಲ್ಲ ಎಂದು ಹೇಳಿಲ್ಲ.
ಆರೋಪಿಗಳ ಬಂಧನಕ್ಕೆ ಮುಂಚೆಯೇ ಪ್ರಕರಣಕ್ಕೆ ಕೋಮುಬಣ್ಣ ಹಚ್ಚಿ ರಾಜಕೀಯ ಲಾಭ ಪಡೆಯಲು ಕೆಲವು ಸ್ಥಳೀಯ ನಾಯಕರು ಮುಂದಾಗಿದ್ದರು. ಇಂಥ ಪರಿಸ್ಥಿತಿಯಲ್ಲಿ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಲು ನಾನು ಪ್ರಯತ್ನಿಸಿದ್ದೇನೆ. ಯಾರ ಪರವಾಗಿ ಅಥವಾ ವಿರುದ್ಧವಾಗಿ ಮಾತನಾಡುವ ಉದ್ದೇಶ ನನ್ನದಾಗಿರಲಿಲ್ಲ ಎಂದು ಹೇಳಿದ್ದಾರೆ.