ಮಂಗಳೂರು: ಬಜ್ಜೆಯಲ್ಲಿ ಕೊಲೆಯಾದ ರೌಡಿ ಶೀಟರ್ ಸುಹಾಶ್ ಶೆಟ್ಟಿ ಮನೆಗೆ ಶುಕ್ರವಾರ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿ, ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಹಾಸ್ ಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಮಂಗಳೂರಿನಲ್ಲಿ ನಡೆದ ಈ ಘಟನೆ ಖಂಡನಾರ್ಹ. ಬಿಜೆಪಿಯು ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಸುಹಾಸ್ ಜೀವಕ್ಕೆ ಬೆದರಿಕೆ ಇದ್ದರೂ ರಕ್ಷಣೆ ಇಲ್ಲದಿರುವುದು ಪೊಲೀಸರ ವೈಫಲ್ಯ, ಎಂದರು.
ಘಟನೆಯಲ್ಲಿ ರಾಜ್ಯ ಸರಕಾರದ, ಗೃಹ ಇಲಾಖೆಯ ಮತ್ತು ಪೊಲೀಸ್ ಇಲಾಖೆಯ ವೈಫಲ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಸರಕಾರದ ನೀತಿಗಳಿಂದ ಹಿಂದೂ ಸಂಘಟನೆಗಳಿಗೆ, ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಸರಕಾರದ ಮೇಲೆ ವಿಶ್ವಾಸವೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಆ ಬಡ ಕುಟುಂಬದ ಜೊತೆ ನಾವಿದ್ದೇವೆ. ಪಕ್ಷದ ಪರವಾಗಿ 25 ಲಕ್ಷ ರೂ. ಪರಿಹಾರ ಹಣವನ್ನು ಘೋಷಣೆ ಮಾಡುತ್ತಿದ್ದೇವೆ. ಘಟನೆಯ ಗಂಭೀರತೆ, ಕುಟುಂಬದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸರಕಾರವೂ ಪರಿಹಾರ ಘೋಷಣೆ ಮಾಡಬೇಕು ಎಂದು ಅವರು ಆಗ್ರಸಿದರು.
ಈ ಸಂದರ್ಭ ಶಾಸಕರಾದ ಭರತ್ ಶೆಟ್ಟಿ, ರಾಜೇಶ್ ನಾಯ್ಕ, ಯಶ್ ಪಾಲ್ ಸುವರ್ಣ, ಭಾಗೀರತಿ ಮುರುಳ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಇದ್ದರು.