ಪಹಲ್ಗಾಮ್ ಉಗ್ರ ದಾಳಿ ಬೆನ್ನಲ್ಲೇ ದೇಶದಲ್ಲಿ ಕ್ಷಣ ಕ್ಷಣಕ್ಕೂ ಮಹತ್ವದ ಬೆಳವಣಿಗೆಗಳಾಗುತ್ತಿವೆ. ದೇಶದ ಸುರಕ್ಷತೆಯ ವಿಚಾರವಾಗಿ ಭಾರಿ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ಸೂಚಿಸಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಕಾವಲು ಪಡೆ, ಭಾರತೀಯ ಕೊಸ್ಟ್ ಗಾರ್ಡ್ ನೌಕಾ ನೆಲೆ ಸಿಬ್ಬಂದಿ ಹಾಗೂ ಜಿಲ್ಲಾ ಪೊಲೀಸ್ ಸಕ್ರಿಯರಾಗಿದ್ದಾರೆ. ಒಂದು ಕಡೆ ಅರಬ್ಬಿ ಸಮುದ್ರ, ಇನ್ನೊಂದು ಕಡೆ ದೇಶದ ದೊಡ್ಡ ನೌಕಾ ನೆಲೆ. ಮತ್ತೊಂದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಬರುವ ದೇಶ ವಿದೇಶಿಗರು. ಈ ಎಲ್ಲ ಸೂಕ್ಷ್ಮ ಕಾರಣಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಸಮುದ್ರದ ಆಳಕ್ಕೆ ಹೋಗುವ ಮೀನುಗಾರಿಕೆ ಬೋಟ್ ಹಾಗೂ ಹಡಗುಗಳ ಮೇಲೆ ಕಣ್ಣಿಡಲಾಗಿದ್ದು, ಕರಾವಳಿ ಕಾವಲು ಪಡೆ ಹಾಗೂ ಭಾರತಿಯ ಕೊಸ್ಟಲ್ ಗಾರ್ಡ್ ಸಿಬ್ಬಂದಿ ಸಮುದ್ರದಾಳಕ್ಕೆ ಹೋಗಿ ಪ್ರತಿಯೊಂದು ಬೋಟ್ಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲದೆ ಜಿಲ್ಲೆಯ ಬಂದರುಗಳಿಗೆ ಬರುವ ಪ್ರತಿಯೋಂದು ಪರ್ಷಿಯನ್ ಬೋಟ್ಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬಂದರು ಹಾಗೂ ಸಮುದ್ರದ ಆಳದಲ್ಲಿ ಯಾವುದೇ ಅನುಮಾನಸ್ಪದ ಹಾಗೂ ಬೇರೆ ಕಡೆಯ ಬೋಟ್ ಕಂಡು ಬಂದರೆ ತಕ್ಷಣ ಮಾಹಿತಿ ತಿಳಿಸುವಂತೆ ಮೀನುಗಾರರಿಗೆ ಪೊಲೀಸರ ತಂಡ ಮನವಿ ಮಾಡಿಕೊಂಡಿದೆ.
ದೇಶದ ಅತಿ ದೊಡ್ಡ ಕದಂಬ ನೌಕಾ ನೆಲೆ ಕಾರವಾರ ಬಳಿ ಇದೆ. ಹೀಗಾಗಿ ಕಾರವಾರ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಬರುವ ವಲಸಿಗರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ನೌಕಾನೆಲೆ ಭದ್ರತೆ ವಿಚಾರವಾಗಿ ಕೇಂದ್ರ ಗೃಹ ಇಲಾಖೆಯ ಸೂಚನೆಯ ಪ್ರಕಾರ, ನೌಕಾನೆಲೆಯ ಕೂಗಳತೆ ದೂರದಲ್ಲಿನ ರವೀಂದ್ರನಾಥ್ ಠಾಗೋರ ಕಡಲ ತೀರದಲ್ಲಿ ಮೇ 4 ರಂದು ನಡೆಯಬೇಕಿದ್ದ ಪ್ರಸಿದ್ಧ ಕರಾವಳಿ ಉತ್ಸವವನ್ನು ಮುಂದೂಡಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.
ಪ್ರವಾಸಿ ತಾಣ, ಹೋಂ ಸ್ಟೇ ಹಾಗೂ ಲಾಡ್ಜ್‍ಗಳಿಗೆ ಸಿಸಿ ಕ್ಯಾಮರಾ ಕಡ್ಡಾಯ
ಗೋಕರ್ಣ, ಮುರುಡೇಶ್ವರ ಹಾಗೂ ಯಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಬರುವ ಹಿನ್ನೆಲೆ ಜಿಲ್ಲೆಯ ಪ್ರತಿಯೊಂದು ಪ್ರವಾಸಿ ತಾಣ, ಹೊಂ ಸ್ಟೇ ಹಾಗೂ ಲಾಡ್ಜ್‍ಗಳಿಗೆ ಸಿಸಿ ಕ್ಯಾಮರಾ ಸೇರಿದಂತೆ ಹೆಚ್ಚಿನ ಸುರಕ್ಷತೆ ಕ್ರಮ ಕೈಗೊಳ್ಳುವಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಸೂಚನೆ ಕೊಡುತ್ತಿದ್ದಾರೆ.
ಒಟ್ಟಾರೆಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಆದ್ಯತೆ ಕೊಡಲಾಗುತ್ತಿದ್ದು, ಜಿಲ್ಲಾಡಳಿತ ಹಾಗೂ ನೌಕಾ ಪಡೆ ಮತ್ತು ಭಾರತೀಯ ಕೊಸ್ಟ್ ಗಾರ್ಡ್ ತಂಡಗಳು ಸಕ್ರಿಯವಾಗಿ ಕಾರ್ಯಾಚರಿಸುತ್ತಿವೆ.