ಬೆಲೆ ಏರಿಕೆಯ ಸದ್ದು ಜೋರಾಗಿದ್ದು, ಈಗಾಗಲೇ ಡೀಸೆಲ್, ಹಾಲು, ವಿದ್ಯುತ್ ದರ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಮದ್ಯದ ದರ ಏರಿಕೆಗೆ ರಾಜ್ಯ ಸರ್ಕಾರ ಮುಂದಾಗಿದೆ.
ಬಿಯರ್ ಮೇಲಿನ ಅಬಕಾರಿ ಸುಂಕವನ್ನ 195% ನಿಂದ 205% ಹೆಚ್ಚಿಸುವ ಬಗ್ಗೆ ಸರ್ಕಾರ ಕರಡು ಅಧಿಸೂಚನೆ ಪ್ರಕಟಿಸಿದೆ. ಇದಕ್ಕೆ ವಾರದೊಳಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.
ಬ್ರಾಂಡಿ, ವಿಸ್ಕಿ, ರಮ್, ಜಿನ್‍ಗಳ ದರವನ್ನ ಪ್ರತಿ ಕ್ವಾಟರ್‍ಗೆ 10 ರೂ.ನಿಂದ 15 ರೂ. ವರೆಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಅಲ್ಲದೇ ಬಿಯರ್ ದರವನ್ನ 10 ರೂ. ನಿಂದ 20 ರೂ. ವರೆಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಆಲ್ಕೋಹಾಲ್ ಹೆಚ್ಚಿರುವ ಬ್ರ್ಯಾಂಡ್‍ಗಳ ಬಿಯರ್ ಬೆಲೆ ಗಣನೀಯವಾಗಿ ಹೆಚ್ಚಿಸಲು ನಿರ್ಧರಿಸಲಾಗಿದೆ. ಇನ್ನೂ ಹೈ ಎಂಡ್ ಅಥವಾ ಪ್ರೀಮಿಯಂ ಮದ್ಯಗಳ ದರಗಳಲ್ಲಿ ಏರಿಕೆ ಇರುವುದಿಲ್ಲ.
ರಾಜ್ಯ ಸರ್ಕಾರದಿಂದ ಎರಡು ವರ್ಷಗಳಲ್ಲಿ ಮೂರನೇ ಬಾರಿಗೆ ಮದ್ಯದ ದರ ಏರಿಕೆಗೆ ತೀರ್ಮಾನಿಸಲಾಗಿದೆ. 40 ಸಾವಿರ ಕೋಟಿ ರೂ. ಆದಾಯದ ಗುರಿ ಮುಟ್ಟಲು ಎಣ್ಣೆ ಪ್ರಿಯರಿಗೆ ಸರ್ಕಾರ ಶಾಕ್ ನೀಡಲು ಮುಂದಾಗಿದೆ.