ಮೈಸೂರು ಮೂಲದ ಸಾಫ್ಟ್‌ವೇರ್ ಕಂಪನಿ ಮಾಲೀಕನಿಂದ ಘೋರ ಕೃತ್ಯ
ಮೈಸೂರು: ಮೈಸೂರು ಮೂಲದ ಅಮೆರಿಕದ ಉದ್ಯಮಿಯೊಬ್ಬರು ಹೆಂಡತಿ ಮತ್ತು ಮಗನನ್ನು ಗುಂಡಿಕ್ಕಿ ಸಾಯಿಸಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸಂಭವಿಸಿದೆ. ಇನ್ನೋರ್ವ ಮಗ ಹೊರಗಿದ್ದ ಕಾರಣ ಬದುಕುಳಿದಿದ್ದಾನೆ. ಹರ್ಷವರ್ಧನ ಕಿಕ್ಕೇರಿ ಈ ಕೃತ್ಯವೆಸಗಿದ ಉದ್ಯಮಿ. ಅಮೆರಿಕದ ವಾಷಿಂಗ್ಟನ್ ಬಳಿಯ ನ್ಯೂಕ್ಯಾಸಲ್‌ನಲ್ಲಿ ಪತ್ನಿ ಶ್ವೇತಾ ಮತ್ತು 14 ವರ್ಷದ ಮಗನನ್ನು ಗುಂಡಿಕ್ಕಿ ಕೊಂದಿದ್ದಾರೆ. ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಏ.24ರಂದು ನಡೆದಿದೆ. ದಂಪತಿಯ ಕಿರಿಯ ಮಗ ಘಟನೆ ನಡೆದಾಗ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಆತ ಸಾವಿನ ದವಡೆಯಿಂದ ಬಚಾವಾಗಿದ್ದಾನೆ.
ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಿಂಗ್ ಕೌಂಟಿ ಪೊಲೀಸರು 911 ಕರೆಗೆ ಸ್ಪಂದಿಸಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಿಂಗ್ ಕೌಂಟಿ ಶೆರಿಫ್ ವಕ್ತಾರ ಬ್ರಾಂಡಿನ್ ಹಲ್ ಪ್ರತಿಕ್ರಿಯಿಸಿದ್ದು, ಮನೆಯ ಕಿಟಕಿಯಲ್ಲಿ ರಕ್ತದ ಕಲೆಗಳು, ಬೀದಿಯಲ್ಲಿ ಒಂದು ಗುಂಡು ಮತ್ತು ಮೂರು ಮೃತದೇಹಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.
ಕುಟುಂಬದ ಸ್ನೇಹಿತರ ಪ್ರಕಾರ, ಹರ್ಷವರ್ಧನ ಅವರು 2022ರಿಂದ ಮೈಸೂರಿಗೆ ಭೇಟಿ ನೀಡಿಲ್ಲ. ಅವರ ಅಣ್ಣ ಚೇತನ್ ಕೂಡ ಅಮೆರಿಕದಲ್ಲಿದ್ದು, ಇತ್ತೀಚೆಗಷ್ಟೇ ಮೈಸೂರಿಗೆ ವಾಪಸ್ಸಾಗಿದ್ದರು. ಮೃತ ಹರ್ಷವರ್ಧನ ಅವರ ತಂದೆ ಡಾ.ಕಿಕ್ಕೇರಿ ನಾರಾಯಣ ಅವರು ಪ್ರಸಿದ್ಧ ಭಾಷಾ ತಜ್ಞ ಮತ್ತು ಪ್ರಗತಿಪರ ಹೋರಾಟಗಾರರಾಗಿದ್ದರು.
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದವರಾದ ಹರ್ಷವರ್ಧನ ಇಂಜಿನಿಯರಿಂಗ್ ಪದವಿ ಪಡೆದ ನಂತರ ಮೈಕ್ರೋಸಾಫ್ಟ್ ಉದ್ಯೋಗಿಯಾಗಿದ್ದರು. ನಂತರ ರೋಬೊಟಿಕ್ ತಂತ್ರಜ್ಞಾನ ಆಧಾರಿತ ‘ಹೋಲೊವರ್ಲ್ಡ್’ ಹಾಗೂ ‘ಹೋಲೊಸ್ಕೂಟ್’ ಕಂಪನಿಗಳನ್ನು ಸ್ಥಾಪಿಸಿದ್ದರು. ಹರ್ಷವರ್ಧನ ಕಂಪನಿಯ ಸಿಇಒ ಮತ್ತು ಸಿಟಿಒ ಆಗಿದ್ದರೆ, ಪತ್ನಿ ಶ್ವೇತಾ ಅಧ್ಯಕ್ಷರಾಗಿದ್ದರು. ಕಂಪನಿಯ ಉತ್ಪನ್ನಗಳಿಗೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ರಾಯಭಾರಿಯಾಗಿದ್ದರು. ವಿಶ್ವಸಂಸ್ಥೆಯ ‘ನೊವುಸ್’ ಸಮ್ಮೇಳನದಲ್ಲಿ ಕಂಪನಿಗೆ ‘ಸುಸ್ಥಿರ ತಂತ್ರಜ್ಞಾನ ಕಂಪನಿ’ ಎಂಬ ಶ್ರೇಯ ಸಿಕ್ಕಿತ್ತು. ಅಲ್ಲದೆ ಗಡಿ ಕಾಯುವ ರೋಬೊಟ್‌ಗಳ ಅಭಿವೃದ್ಧಿಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹರ್ಷ ಈ ಹಿಂದೆ ಮಾತುಕತೆ ನಡೆಸಿದ್ದರು. ವಿಜಯನಗರ ಮೂರನೇ ಹಂತದ ನಿರ್ಮಿತಿ ಕೇಂದ್ರದ ರಸ್ತೆಯಲ್ಲಿ 2018ರಲ್ಲಿ ‘ಹೋಲೊವರ್ಲ್ಡ್’ ಕಂಪನಿಯ ಕಾರ್ಪೊರೇಟ್ ಕಚೇರಿ ಆರಂಭಿಸಿ, ಕೋವಿಡ್ ನಂತರ ಅಮೆರಿಕಕ್ಕೆ ವಾಪಸಾಗಿದ್ದರು.