ಹಿಜಾಬ್ ನಿಷೇಧ ಮುಂದುವರಿಕೆ; ಪರೀಕ್ಷಾ ಕೇಂದ್ರಗಳಲ್ಲಿ ಬಿಗು ಬಂದೋಬಸ್ತ್
ಬೆಂಗಳೂರು : ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗುತ್ತಿದ್ದು, ರಾಜ್ಯದ 1,109 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. 5,716 ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ 7,26,195 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದು, ಕಲಾ ವಿಭಾಗದಲ್ಲಿ 2,34,815 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 2,47,260 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 2,44,120 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
ಪರೀಕ್ಷೆಗೆ ಹಾಜರಾಗುವ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವಂತಿಲ್ಲ. ಕಳೆದ ವರ್ಷದ ನಿಯಮ ಈ ಬಾರಿಯೂ ಮುಂದುವರಿಯಲಿದ್ದು, ಒಂದೊಮ್ಮೆ ಹಿಜಾಬ್ ಧರಿಸಿ ಬಂದರೆ ಅಂತಹ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ಸಮವಸ್ತ್ರ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ಕಳೆದ ವರ್ಷ ಹಿಜಾಬ್ಗೆ ಪಟ್ಟು ಹಿಡಿದಿದ್ದ 6 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿರಲಿಲ್ಲ. ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಪರೀಕ್ಷಾ ಕೇಂದ್ರಕ್ಕೆ 1109 ಸಹ ಮುಖ್ಯ ಅಧೀಕ್ಷಕರು, 64 ಜಿಲ್ಲಾ ಜಾಗೃತದಳ, 525 ತಾಲೂಕು ಜಾಗೃತ ದಳ ಹಾಗೂ 2373 ವಿಶೇಷ ಜಾಗೃತದಳ ನಿಯೋಜನೆ ಮಾಡಲಾಗುತ್ತದೆ.
ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್, ಸಿಸಿ ಕ್ಯಾಮೆರಾ ಕಣ್ಗಾವಲು, ಪರೀಕ್ಷಾ ಕೇಂದ್ರದ ಸುತ್ತಲಿನ ಜೆರಾಕ್ಸ್ ಕೇಂದ್ರಗಳು ಪರೀಕ್ಷೆ ಅವಧಿಯಲ್ಲಿ ಬಂದ್, ಸೈಬರ್ ಸೆಂಟರ್, ಟ್ಯೂಷನ್ ಕೇಂದ್ರಗಳು, ಕಂಪ್ಯೂಟರ್, ಗೇಮ್ಸ್ ಕೇಂದ್ರಗಳ ಮೇಲೆ ವಿಶೇಷ ನಿಗಾ ಇಡಲಾಗಿದೆ.ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಇಯರ್‌ಫೋನ್ ಸೇರಿದಂತೆ ಎಲ್ಲ ರೀತಿಯ ಇಲೆಕ್ಟ್ರಾನಿಕ್ಸ್ ಸಾಧನಗಳನ್ನು ನಿಷೇಧಿಸಲಾಗಿದೆ.ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳ ವಾರ್ಷಿಕ ಬಸ್ ಪಾಸ್ ಅವಧಿ ಮುಕ್ತಾಯವಾಗಿದ್ದರೆ ಚಿಂತಿಸಬೇಕಿಲ್ಲ. ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳ ಉಚಿತವಾಗಿ ಪ್ರಯಾಣ ಮಾಡಬಹುದು.