ಪುತ್ತೂರು: ಯೂರೋಪಿಯನ್ ಒಕ್ಕೂಟದ ಷರತ್ತುಗಳನ್ನು ಪಾಲಿಸಲು ದಕ್ಷಿಣ ಕನ್ನಡ ಜಿಲ್ಲೆಯ ರಬ್ಬರ್ ಬೆಳೆಯ ಜಿಯೋ ಮ್ಯಾಪಿಂಗ್ ಗೆ ಸಿದ್ದತೆ ನಡೆಸುತ್ತಿದ್ದು ,ಈ ಪ್ರಕ್ರಿಯೆಯ ಯಾವುದೇ ವೆಚ್ಚವನ್ನು ರಬ್ಬರ್ ಬೆಳೆಗಾರರಿಂದ ಸಂಗ್ರಹಿಸಬಾರದು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS )ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ರಬ್ಬರ್ ಮಂಡಳಿ ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದೆ.
ಈ ಕುರಿತು ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡರುಗಳಾದ ಕೆ.ಯಾಧವ ಶೆಟ್ಟಿ. ಕೃಷ್ಣಪ್ಪ ಸಾಲ್ಯಾನ್, ಬಿ.ಎಂ.ಭಟ್, ಲಕ್ಷ್ಮಣಗೌಡ, ಪಿ.ಕೆ.ಸತೀಶನ್ ಪುತ್ತೂರು, ಸದಾಶಿವ ದಾಸ್, ಶ್ಯಾಮರಾಜ್ ಪಟ್ರಮೆ, ಅಜಿ.ಎಂ.ಜೋಸ್ ಪುತ್ತೂರಲ್ಲಿ ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಈಗಾಗಲೇ ರಬ್ಬರ್ ಬೆಳೆಗಾರರು ಉತ್ಪಾದನಾ ವೆಚ್ಚ ಹೆಚ್ಚಳ ಹಾಗೂ ರಬ್ಬರ್ ಬೆಲೆ ಕುಸಿತದಿಂದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯೂರೋಪಿಯನ್ ಒಕ್ಕೂಟವು ಭಾರತದಿಂದ ರಬ್ಬರ್ ಆಮದಿಗೆ ಅರಣ್ಯ ನಾಶ ಮಾಡಿ ರಬ್ಬರ್ ಬೆಳೆದಿಲ್ಲ ಎಂಬ ಸರ್ಟಿಫಿಕೇಟ್ ಒದಗಿಸುವ ಷರತ್ತು ವಿಧಿಸಿವೆ. ಆಮೇರಿಕಾ ಹಾಗೂ ಯೂರೋಪಿಯನ್ ದೇಶಗಳು ಭಾರತದ ಮೇಲೆ ಸುಂಕ ರಹಿತ ಮುಕ್ತ ವ್ಯಾಪಾರದ ಒತ್ತಡ ಹಾಕುತ್ತಲೇ, ತಮ್ಮ ದೇಶಗಳಿಗೆ ಭಾರತದ ಉತ್ಪನ್ನಗಳು ಬರದಂತೆ ಸುಂಕಯೇತರ ಅಡೆತಡೆಗಳನ್ನು ಸೃಷ್ಟಿಸಿಕೊಂಡಿವೆ. ಇಂತಹ ಅಡೆತಡೆಗಳನ್ನು ವಿರೋಧಿಸಿ ಸೆಡ್ಡು ಹೊಡೆದು ನಮ್ಮ ರಾಜ್ಯದ ಹಾಗೂ ದೇಶದ ರಬ್ಬರ್ ಬೆಳೆಗಾರರಿಗೆ ವೈಜ್ಞಾನಿಕ ಬೆಲೆ ದೊರಕಿಸಿಕೊಡುವ ಬದಲು ಸಾಮ್ರಾಜ್ಯಶಾಹಿ ದೇಶಗಳ ಅಸಮಾನ ಷರತ್ತುಗಳನ್ನು ಪಾಲಿಸುವಂತೆ ನಮ್ಮ ರೈತರನ್ನು ಒತ್ತಾಯಿಸಲಾಗುತ್ತಿದೆ. ಇದು ತೀವ್ರ ಖಂಡನೀಯ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತಿಳಿಸಿದೆ. ಅಲ್ಲದೆ ದ.ಕ. ಜಿಲ್ಲೆಯಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಭೂಮಿಯಲ್ಲಿ ರಬ್ಬರ್ ಬೆಳೆಯಲಾಗುತ್ತಿದೆ ಎಂದರು.
ಕುಮ್ಕಿ ಭೂಮಿಯ ರಬ್ಬರ್ ಬೆಳೆ ಪ್ರದೇಶದ ರೈತರಿಗೆ ಯಾವುದೇ ಕಿರುಕುಳ ಆಗದಂತೆ ಜೀಯೋ ಮ್ಯಾಪಿಂಗ್ ಸಂದರ್ಭದಲ್ಲಿ ರಬ್ಬರ್ ಮಂಡಳಿ ಕ್ರಮ ವಹಿಸಬೇಕು. ರಬ್ಬರ್ ಮಡಳಿಯಿಂದ ಜೀಯೋ ಮ್ಯಾಪಿಂಗ್ ಮಾಡಲು ಅನುಮೋದನೆ ಪಡೆದಿರುವ ಟಿಆರ್ ಎಸ್ ಟಿಒಐ ನಿಂದ ರೈತರಿಗೆ ಯಾವುದೇ ವೆಚ್ಚ ಆಗದಂತೆ ನಿಗಾ ವಹಿಸಬೇಕು ಮತ್ತು ಪ್ರತಿ ರಬ್ಬರ್ ಬೆಳೆಗಾರರಿಗೆ ಜೀಯೋ ಮ್ಯಾಪಿಂಗ್ ಗೆ ಸಹಕರಿಸುವ ಕಾರಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಬ್ಸಿಡಿ ಒದಗಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ