ವೇದಿಕೆ ಮೇಲೆ ಎಸ್‌ಪಿಗೆ ಹೊಡೆಯಲು ಕೈ ಎತ್ತಿದ ಸಿದ್ದರಾಮಯ್ಯ : ವೀಡಿಯೊ ವೈರಲ್‌

ಕಾಂಗ್ರೆಸ್‌ ಸಭೆಯೊಳಗೆ ಬಂದು ಸಿಎಂಗೆ ಕಪ್ಪು ಬಾವುಟ ತೋರಿಸಿ ಗೋ ಗೋ ಪಾಕಿಸ್ಥಾನ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತೆಯರು

ಬೆಳಗಾವಿ : ಬೆಳಗಾವಿಯಲ್ಲಿ ನಿನ್ನೆ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಕಾಂಗ್ರೆಸ್‌ನ ಪ್ರತಿಭಟನಾ ಸಭೆ ಗೊಂದಲದ ಗೂಡಾಯಿತು. ಬಿಜೆಪಿಯ ಮಹಿಳಾ ಕಾರ್ಯಕರ್ತರು ಸಭೆಯೊಳಗೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದು, ಇದರಿಂದ ಕೆರಳಿ ಕೆಂಡವಾದ ಸಿದ್ದರಾಮಯ್ಯನವರು ಬೆಳಗಾವಿ ಎಸ್‌ಪಿಯನ್ನು ವೇದಿಕೆಗೆ ಕರೆದು ಹೊಡೆಯಲು ಕೈ ಎತ್ತಿದ ವೀಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಸಿದ್ದರಾಮಯ್ಯನವರ ಸಾರ್ವಜನಿಕ ವರ್ತನೆಯ ಬಗ್ಗೆ ಭಾರಿ ಟೀಕೆ ಮತ್ತು ಖಂಡನೆ ವ್ಯಕ್ತವಾಗಿದೆ. ಕಾರ್ಕಳ ಶಾಸಕ ಸುನಿಲ್‌ ಕುಮಾರ್‌, ಸಂಸದ ಜಗದೀಶ್‌ ಶೆಟ್ಟರ್‌ ಸಹಿತ ಹಲವು ಬಿಜೆಪಿ ನಾಯಕರು ವೇದಿಕೆಯಲ್ಲೇ ಉನ್ನತ ಪೊಲೀಸ್‌ ಅಧಿಕಾರಿಗೆ ಕಪಾಲಕ್ಕೆ ಹೊಡೆಯಲು ಕೈ ಎತ್ತಿದ ಸಿದ್ದರಾಮಯ್ಯನವರದ್ದು ದರ್ಪ ಮತ್ತು ಅಹಂಕಾರದ ಪರಮಾವಧಿಯ ವರ್ತನೆ. ಇದರಿಂದ ಪೊಲೀಸರ ನೈತಿಕ ಸ್ಥೈರ್ಯ ಕುಸಿಯಲಿದೆ ಎಂದು ಖಂಡಿಸಿದ್ದಾರೆ.









https://screenapp.io/app/#/shared/8P4BcrrHNx























 
 

ಕೆಲಸಮಯದ ಹಿಂದೆ ವಿಜಯಪುರ ಜಿಲ್ಲೆಯಲ್ಲಿ ಜರುಗಿದ ಕಾಂಗ್ರೆಸ್‌ನ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯನವರು ಇದೇ ರೀತಿ ವೇದಿಕೆಯಲ್ಲೇ ಜಿಲ್ಲಾಧಿಕಾರಿಯನ್ನು ಗದರಿಸಿದ್ದರು. ಕೆಲವರು ಈ ವೀಡಿಯೊವನ್ನು ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಮತ್ತೆ ಹರಿಯಬಿಟ್ಟಿದ್ದಾರೆ.

ಸಿದ್ದರಾಮಯ್ಯ ಭಾಷಣ ಮಾಡುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತೆಯರು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಕೇಂದ್ರ ಸರ್ಕಾರದ ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯ ಕಾಂಗ್ರೆಸ್​ ಮುಖಂಡರು ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ನಡೆಸಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಹಲ್ಗಾಮ್​ ಉಗ್ರರ ದಾಳಿ ಬಗ್ಗೆ ಮಾತನಾಡುತ್ತಿದ್ದಂತೆ ಓರ್ವ ಬಿಜೆಪಿ ಕಾರ್ಯಕರ್ತೆ ಗೋ ಗೋ ಪಾಕಿಸ್ಥಾನ ಅಂತ ಘೋಷಣೆ ಕೂಗಿದರು. ಉಳಿದ ಬಿಜೆಪಿ ಕಾರ್ಯಕರ್ತೆಯರು ಕಪ್ಪು ಬಟ್ಟೆ ಪ್ರದರ್ಶನ ಮಾಡಿದರು. ಕೂಡಲೆ ಸ್ಥಳದಲ್ಲಿದ್ದ ಪೊಲೀಸರು ಬಿಜೆಪಿ ಕಾರ್ಯಕರ್ತೆಯರನ್ನು ವಶಕ್ಕೆ ಪಡೆದರು.
ಇವರು ಮೊದಲೇ ಬಂದು ವೇದಿಕೆ ಪಕ್ಕದಲ್ಲಿದ್ದ ಸಾರ್ವಜನಿಕರ ಗ್ಯಾಲರಿಯಲ್ಲಿ ನಿಂತಿದ್ದರು. ಕೇಂದ್ರದ ಭದ್ರತಾ ವೈಫಲ್ಯ ಅಂತ ಸಿಎಂ ಹೇಳಿದ್ದಂತೆ ಕಪ್ಪು ಬಟ್ಟೆ ಪ್ರದರ್ಶನ ಮಾಡಿದರು.

ಬಿಜೆಪಿ ಕಾರ್ಯಕರ್ತರು ಕಪ್ಪು ಬಟ್ಟೆ ಪ್ರದರ್ಶನ ಮಾಡಿದ್ದಕ್ಕೆ ಗರಂ ಆದ ಸಿಎಂ ಸಿದ್ದರಾಮಯ್ಯ, ಅಲ್ಲೇ ಇದ್ದ ಎಸ್‌ಪಿಯನ್ನು ವೇದಿಕೆ ಮೇಲೆ ಕರೆದು ತರಾಟೆಗೆ ತೆಗೆದುಕೊಂಡರು. ಕಪ್ಪು ಬಟ್ಟೆ ಪ್ರದರ್ಶನ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಆಕ್ರೋಶದಲ್ಲೇ ಭಾಷಣ ಮಾಡಿದರು. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಜೈ ಕಾಂಗ್ರೆಸ್, ಜೈ ಬಾಪು , ಜೈ ಭೀಮ್ ಘೋಷಣೆ ಕೂಗಿದರು. ನಾವು ಯಾರಿಗೂ ಹೆದರುವುದಿಲ್ಲ ಅಂತ ಗುಡುಗಿದ‌‌ರು.

ಬಿಜೆಪಿ ಕಾರ್ಯಕರ್ತೆಯರಾದ ಶಿಲ್ಪಾ ಕೇಕ್ರೆ, ಪವಿತ್ರಾ, ಸುಮಿತ್ರಾ, ರೇಷ್ಮಾ ಹಾಗೂ ಅನ್ನಪೂರ್ಣ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರನ್ನು ಠಾಣೆಯಿಂದ ಠಾಣೆಗೆ ಅಲೆದಾಡಿಸಲಾಗಿದೆ ಎಂದ ಆರೋಪ ಕೇಳಿಬಂದಿದೆ. ನಂತರ ಅವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.
ಸಿದ್ದರಾಮಯ್ಯ ವೇದಿಕೆ ಮೇಲೆಯೇ ಪೊಲೀಸ್​ ಅಧಿಕಾರಿ ಮೇಲೆ ಕೈ ಎತ್ತಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಬೆಳಗಾವಿ ಕ್ಯಾಂಪ್ ಠಾಣೆ ಎದುರು ಪ್ರತಿಭಟನೆ‌‌ ನಡೆಸಿದರು. ಪ್ರತಿಭಟನಾಕಾರರ‌ನ್ನು ಮನವೊಲಿಸಲು ಪೊಲೀಸರು ಮುಂದಾದರು. ಈ ವೇಳೆ ಬಿಜೆಪಿ ಕಾರ್ಯಕರ್ತರು-ಪೊಲೀಸರ ನಡುವೆ ವಾಗ್ವಾದ ನಡೆದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top