ಪುತ್ತೂರು: ಇತಿಹಾಸ ಪ್ರಸಿದ್ಧ ಬಲ್ನಾಡು ಶ್ರೀದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ದಂಡನಾಯಕ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮ ನಡಾವಳಿಯು ಎ.28 ರಂದು ಪೂರ್ವಶಿಷ್ಟ ಸಂಪ್ರದಾಯದಂತೆ ನೆರವೇರಿತು.
ನೇಮ ನಡಾವಳಿಯ ಪೂರ್ವಭಾವಿಯಾಗಿ ಎ.27ರಂದು ಮಧ್ಯಾಹ್ನ ಬಲ್ನಾಡು ಶ್ರೀ ವಿನಾಯಕ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ವಿಶೇಷ ಮಹಾಪೂಜೆ, ಸಂಜೆ ರಂಗಪೂಜೆ, ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ದೈವಗಳ ಭಂಡಾರ ತೆಗೆದು ನೇಮೋತ್ಸವ ನಡೆಯುವ ದೈವಸ್ಥಾನಕ್ಕೆ ಆಗಮಿಸಿದ ಬಳಿಕ ತಂಬಿಲ ಸೇವೆಗಳು ನಡೆದ ಬಳಿಕ ಅನ್ನಸಂತರ್ಪಣೆ ನೆರವೇರಿತು.
ಎ.28 ರಂದು ಬೆಳಿಗ್ಗೆ ದೈವಸ್ಥಾನದಲ್ಲಿ ಗಣಪತಿ ಹೋಮ ನಡೆದು ತಂತ್ರ ತೂಗಿದ ಬಳಿಕ ಶ್ರೀ ದಂಡನಾಯಕ ದೈವದ ವಾಲಸರಿ ನೇಮ ಆರಂಭಗೊಂಡು ಕಿರುವಾಳು ಭಂಡಾರ ವಾಲಸರಿ ಗದ್ದೆಗೆ ತೆರಳಿ, ದಂಡನಾಯಕ ದೈವದ ಮುಖಾಮುಖಿ ನಡೆದು ವಾಲಸರಿ ಗದ್ದೆಯಲ್ಲಿ ದೈವದ ನೇಮ ನಡೆದು ಕಟ್ಟೆ ಮನೆಯ ಬಳಿಯಿರುವ ಕಟ್ಟೆಯಲ್ಲಿ ಪೂಜೆ ನಡೆಯಿತು. ಸಾವಿರಾರು ಮಂದಿ ಭಕ್ತರು ಗದ್ದೆಯ ಸುತ್ತಲೂ ನಿಂತು ಶ್ರೀ ದಂಡನಾಯಕ ದೈವದ ವಾಲಸರಿ, ನೇಮವನ್ನು ಕಣ್ತುಂಬಿಕೊಂಡರು. ಬಳಿಕ ದೈವಸ್ಥಾನಕ್ಕೆ ಆಗಮಿಸಿ ಅಲ್ಲಿ ನೇಮ ನಡೆಯಿತು.
ಮಧ್ಯಾಹ್ನ ಶ್ರೀ ಉಳ್ಳಾಲ್ತಿ ದೈವದ ನೇಮ ನಡಾವಳಿಯಲ್ಲಿ ಶ್ಯಾರ ಮನೆಯಿಂದ ವರ್ಷಂಪ್ರತಿ ತರುವ ಚಿನ್ನದ ಮುಗುಳು ಮಲ್ಲಿಗೆಯನ್ನು ಉಳ್ಳಾಲ್ತಿ ದೈವಕ್ಕೆ ಮುಡಿದು ನೇಮ ನೆರವೇರಿತು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಅಪರಾಹ್ನ ಪರಿವಾರ ದೈವಗಳಾದ ಶ್ರೀಕಾಳರಾಹು ಮತ್ತು ಮಲರಾಯ ದೈವಗಳ ನೇಮೋತ್ಸವದೊಂದಿಗೆ ಸಂಪನ್ನಗೊಂಡಿತು. ನೇಮೋತ್ಸವದಲ್ಲಿ ಮುಂಜಾನೆಯಿಂದಲೇ ಭಕ್ತರು ತಂಡೋಪತಂಡವಾಗಿ ದೈವಸ್ಥಾನಕ್ಕೆ ಆಗಮಿಸಿ, ಉಳ್ಳಾಲ್ತಿಗೆ ಪ್ರಿಯವಾದ ಮಲ್ಲಿಗೆ ಹೂವು, ಕುಂಕುಮ, ಪಟ್ಟೆ ಸೀರೆ, ಸೀಯಾಳ ಅರ್ಪಿಸಿ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.
ಸ್ವರ್ಣದ ಮಲ್ಲಿಗೆ ಮೊಗ್ಗಿನ ಹಾರ, ರಜತ ಗಗ್ಗರ ಸಮರ್ಪಣೆ:
ಮಲ್ಲಿಗೆ ಪ್ರೀಯೆ ಬಲ್ನಾಡು ಉಳ್ಳಾಲ್ತಿಗೆ ಈ ವರ್ಷದ ನೇಮೋತ್ಸವದಲ್ಲಿ ವಿಶೇಷವಾಗಿ ಊರ, ಪರವೂರ ಭಕ್ತಾದಿಗಳ ದೇಣಿಗೆಯಿಂದ ನಿರ್ಮಾಣಗೊಂಡಿರುವ ಸ್ವರ್ಣದ ಮಲ್ಲಿಗೆಯ ಮೊಗ್ಗಿನ ಹಾರ ಹಾಗೂ ಬೆಳ್ಳಿಯ ಗಗ್ಗರವು ಸಮರ್ಪಣೆಗೊಂಡಿತು.
ಜಿಎಸ್ಬಿ ಸಮುದಾಯದಿಂದ ಸೊಂಟಪಟ್ಟಿ ಸಮರ್ಪಣೆ :
ಪುತ್ತೂರು ಪೇಟೆಯ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್ಬಿ) ಸಮಾಜ ಬಾಂಧವರು ಸ್ವರ್ಣ ಹಾಗೂ ರಜತದಿಂದ ತಯಾರಿಸಿದ ಸೊಂಟ ಪಟ್ಟಿ(ಒಡ್ಡನ)ಯು ಎ.27 ರಂದು ಸಮರ್ಪಿಸಿದರು.