ಭಾರತದ ಬಗ್ಗೆ ಸುಳ್ಳು ಮಾಹಿತಿ ಪ್ರಸಾರ ಮಾಡುತ್ತಿದ್ದ ಚಾನೆಲ್‌ಗಳಿಗೆ ನಿಷೇಧ
ನವದೆಹಲಿ: ಪಹಲ್ಗಾಮ್ ದಾಳಿಯ ನಂತರ ಭಾರತದ ಬಗ್ಗೆ ಸುಳ್ಳು ಮಾಹಿತಿ ಪ್ರಕಟಿಸುತ್ತಿದ್ದ ಪಾಕಿಸ್ಥಾನದ ಯೂಟ್ಯೂಬ್ ಚಾನೆಲ್‌ಗಳನ್ನು ಬ್ಯಾನ್ ಮಾಡಲಾಗಿದೆ.
ಕೇಂದ್ರ ಗೃಹ ಸಚಿವಾಲದ ಶಿಫಾರಸ್ಸಿನ ಆಧಾರದಲ್ಲಿ 16 ಯೂಟ್ಯೂಬ್ ಚಾನೆಲ್‌ಗಳನ್ನು ಯೂಟ್ಯೂಬ್ ಭಾರತದಲ್ಲಿ ಬ್ಲಾಕ್ ಮಾಡಿದೆ. ಬ್ಲಾಕ್ ಆದ ಚಾನೆಲ್‌ಗಳ ಪಟ್ಟಿಯಲ್ಲಿ ಡಾನ್ ನ್ಯೂಸ್, ಸಾಮ್ನಾ ಟಿವಿ, ಜಿಯೊ ನ್ಯೂಸ್, ಪಾಕ್ ಮಾಜಿ ಕ್ರಿಕೆಟ್ ಆಟಗಾರ ಶೋಯೆಬ್ ಅಕ್ತರ್ ಅವರ ಚಾನೆಲ್ ಇದೆ.
ಉಗ್ರರ ದಾಳಿಯ ನಂತರ ಭಾರತ, ಭಾರತೀಯ ಸೇನೆ, ಭದ್ರತಾ ಪಡೆಗಳ ವಿರುದ್ಧ ಪ್ರಚೋದನಕಾರಿ ವಿಷಯವನ್ನು ಪ್ರಸಾರ ಮಾಡುತ್ತಿದ್ದವು.
ಈಗ ಈ ಚಾನೆಲ್ ವಿಡಿಯೋ ಮೇಲೆ ಕ್ಲಿಕ್ ಮಾಡಿದರೆ ಚಾನೆಲ್ ಬ್ಲಾಕ್ ಆಗಿರುವ ಸಂದೇಶ ಕಾಣಿಸುತ್ತಿದೆ.
ಬಿಬಿಸಿಗೂ ಬಿಸಿ ಮುಟ್ಟಿಸಿದ ಸರಕಾರ
ಪಹಲ್ಗಾಮ್ ದಾಳಿಯ ನಂತರ ಭಾರತವನ್ನು ಗುರಿಯಾಗಿಸಿ ತಿರುಚಿದ ವರದಿ ಪ್ರಕಟಿಸುತ್ತಿರುವ ಯುಕೆ ಮೂಲದ ಬಿಬಿಸಿಗೆ ಕೇಂದ್ರ ಸರ್ಕಾರ ನೋಟಿಸ್ ಜಾರಿ ಮಾಡಿದೆ. ತನ್ನ ಸುದ್ದಿಗಳಲ್ಲಿ ʼmilitantsʼ ಜಾಗದಲ್ಲಿ ʼterroristsʼ ಎಂದು ಬಳಸುವಂತೆ ಸೂಚಿಸಿದೆ.
ಕನ್ನಡದಲ್ಲಿ Militants ಪದಕ್ಕೆ ಅರ್ಥ ಹುಡುಕಿದರೆ ʼಉಗ್ರರುʼ ಎಂದೇ ಗೂಗಲ್ ತೋರಿಸುತ್ತದೆ. ಆದರೆ ಇಂಗ್ಲಿಷ್‌ನಲ್ಲಿ Militants ಅಂದರೆ ಉಗ್ರರು ಎಂಬ ಅರ್ಥ ಬರುವುದಿಲ್ಲ. ಸಶಸ್ತ್ರ ಪ್ರತಿರೋಧ, ದಂಗೆಗಳು ಅಥವಾ ಗೆರಿಲ್ಲಾ ಯುದ್ಧದಲ್ಲಿ ತೊಡಗಿರುವ ವ್ಯಕ್ತಿಗಳು ಅಥವಾ ಗುಂಪುಗಳನ್ನು ವಿವರಿಸಲು ಸಾಮಾನ್ಯವಾಗಿ ಈ ಪದವನ್ನು ಬಳಸಲಾಗುತ್ತದೆ. ಸರ್ಕಾರದ ವಿರುದ್ಧ ವಿಮೋಚನಾ ಹೋರಾಟ ಮಾಡುತ್ತಿರುವ ವಿಮೋಚನಾ ಹೋರಾಟಗಾರರು, ಪ್ರತ್ಯೇಕವಾದಿಗಳು ಎಂಬ ಅರ್ಥ ಕೊಡುತ್ತದೆ.