ಭೋಪಾಲ : ಮಧ್ಯಪ್ರದೇಶದ ಮಂಡಸೋರ್ ಜಿಲ್ಲೆಯಲ್ಲಿ ಭಾನುವಾರ ವ್ಯಾನ್ ಬಾವಿಗೆ ಬಿದ್ದು ಅದರಲ್ಲಿದ್ದ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಅಪಘಾತ ಸಂಭವಿಸಿದೆ. ಜಿಲ್ಲೆಯ ನಾರಾಯಣಗಢ ಪೊಲೀಸ್ ಠಾಣೆ ವ್ಯಾಪ್ತಿಯ ಕಚರಿಯಾ ಗ್ರಾಮದಲ್ಲಿ ವೇಗವಾಗಿ ಬಂದ ವ್ಯಾನ್ ನಿಯಂತ್ರಣ ತಪ್ಪಿ ಆಳವಾದ ಬಾವಿಗೆ ಬಿದ್ದಿದೆ. ರಕ್ಷಿಸಲು ಬಾವಿಗೆ ಹಾರಿದ ಯುವಕನೂ ಸಾವಿಗೀಡಾಗಿದ್ದಾನೆ. ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರೂ ಸೇರಿದ್ದಾರೆ. ನಾಲ್ಕು ಮಂದಿಯನ್ನು ರಕ್ಷಿಸಲಾಗಿದೆ.
ಉನ್ಹೆಲ್ ಮತ್ತು ರತ್ಲಂ ಜಿಲ್ಲೆಗಳ ಜನರು ವ್ಯಾನಿನಲ್ಲಿ ಪ್ರಯಾಣಿಸುತ್ತಿದ್ದರು. ನೀಮುಚ್ ಜಿಲ್ಲೆಯ ದೇವಸ್ಥಾನಕ್ಕೆ ಭೇಟಿ ನೀಡಲು ರತ್ಲಾಮ್‌ನ ಖೋಜಂಖೇಡಾ ಗ್ರಾಮದಿಂದ ಹೋಗುತ್ತಿದ್ದರು. ದಾರಿಯಲ್ಲಿ ವ್ಯಾನ್ ಬೈಕ್‌ಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ತೆರೆದ ಬಾವಿಗೆ ಬಿದ್ದಿದೆ. ಘಟನೆಯನ್ನು ನೋಡುತ್ತಿದ್ದ ಸ್ಥಳೀಯ ಯುವಕನೊಬ್ಬ ಧೈರ್ಯ ಪ್ರದರ್ಶಿಸಿ ಜನರನ್ನು ರಕ್ಷಿಸಲು ಬಾವಿಗೆ ಹಾರಿದ್ದಾನೆ. ಕೊನೆಗೆ ಆತನೂ ಸಾವನ್ನಪ್ಪಿದ್ದಾನೆ ಎಂದು ಡಿಐಜಿ ಮನೋಜ್ ಸಿಂಗ್ ಮಾಹಿತಿ ನೀಡಿದ್ದಾರೆ.
ವ್ಯಾನಿನಲ್ಲಿ 13 ಜನರಿದ್ದರು. ಈ ಅಪಘಾತದಲ್ಲಿ 12 ಜನರು ಸಾವನ್ನಪ್ಪಿದ್ದಾರೆ. ವ್ಯಾನ್ ಮೊದಲು ಬೈಕಿಗೆ ಡಿಕ್ಕಿ ಹೊಡೆದು ನಂತರ ಬಾವಿಗೆ ಬಿದ್ದಾಗ ಈ ಘಟನೆ ಸಂಭವಿಸಿದೆ. ಬಾವಿಗೆ ಬಿದ್ದ ನಂತರ, ವ್ಯಾನ್‌ನಿಂದ ಎಲ್‌ಪಿಜಿ ಅನಿಲ ಸೋರಿಕೆಯಾಗಲು ಪ್ರಾರಂಭಿಸಿತು, ಇದರಿಂದಾಗಿ ಒಳಗೆ ಸಿಲುಕಿದ್ದ ಜನರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಭೀಕರ ಅಪಘಾತದ ಬಗ್ಗೆ ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ತೀವ್ರ ದುಃಖ ವ್ಯಕ್ತಪಡಿಸಿದೆ. ಮೃತಪಟ್ಟವರ ಸಂಬಂಧಿಕರಿಗೆ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್) ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.