ಸ್ಫೋಟಕದ ಮೂಲಕ ಮನೆಗಳನ್ನು ನಾಶ ಮಾಡಿದ ಸೇನೆ
ಶ್ರೀನಗರ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರನ್ನು ಗುಂಡು ಹಾರಿಸಿ ಕೊಂದ ಭಯೋತ್ಪಾದಕ ಕೃತ್ಯದ ಬಳಿಕ ಉಗ್ರರ ಮನೆಗಳನ್ನು ಭದ್ರತಾ ಪಡೆ ನಾಶ ಮಾಡುತ್ತಿದೆ. ನಿನ್ನೆ ರಾತ್ರಿ ಐಇಡಿ ಸ್ಫೋಟಿಸಿ ಮತ್ತು ಬುಲ್‌ಡೋಜರ್ ಮೂಲಕ ಇಬ್ಬರು ಉಗ್ರರ ಮನೆಯನ್ನು ಭಾರತೀಯ ಸೇನೆ ಧ್ವಂಸ ಮಾಡಿದೆ.
ಲಷ್ಕರ್ ಎ ತೊಯ್ಬಾದ ಉಗ್ರ ಸಂಘಟನೆಯ ಉಗ್ರ ಫಾರೂಕ್ ಎಂಬಾತನ ಮನೆಯನ್ನು ಸೇನೆ ಧ್ವಂಸಗೊಳಿಸಿದೆ. ಕುಪ್ವಾರದ ಕಲಾರೂಸ್ ಪ್ರದೇಶದಲ್ಲಿರುವ ಫಾರೂಕ್ ಮನೆಯನ್ನು ಐಇಡಿ ಸ್ಫೋಟಿಸಿ ಛಿದ್ರಛಿದ್ರ ಮಾಡಿದೆ. ಬಂಡಿಪೋರದಲ್ಲಿ ಲಷ್ಕರ್ ಉಗ್ರ ಜಮೀಲ್ ಅಹ್ಮದ್ ಎಂಬಾತನ ಮನೆಯನ್ನು ಐಇಡಿ ಸ್ಫೋಟಿಸಿ ಕೆಡವಲಾಗಿದೆ. ಇಲ್ಲಿವರೆಗೆ ಒಟ್ಟು 8 ಉಗ್ರರ ಮನೆಯನ್ನು ನಾಶಪಡಿಸಲಾಗಿದೆ.
ಪಹಲ್ಗಾಮ್ ದಾಳಿಯ ನಂತರ ಪುಲ್ವಾಮಾ, ಶೋಪಿಯಾನ್, ಅನಂತ್‌ನಾಗ್, ಕುಲ್ಗಾಮ್ ಮತ್ತು ಕುಪ್ವಾರಾ ಜಿಲ್ಲೆಗಳಲ್ಲಿ ಸ್ಫೋಟಕಗಳನ್ನು ಬಳಸಿ 8 ಭಯೋತ್ಪಾದಕರ ಮನೆಗಳನ್ನು ಕೆಡವಲಾಗಿದೆ. ಈ ಭಯೋತ್ಪಾದಕರು ಲಷ್ಕರ್-ಎ-ತೊಯ್ಬಾಗೆ ಸೇರಿದವರಾಗಿದ್ದು, ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯರಾಗಿದ್ದಾರೆ. ಫಾರೂಕ್ ಪ್ರಸ್ತುತ ಪಾಕಿಸ್ಥಾನದಲ್ಲಿದ್ದು, ಭಾರತದಲ್ಲಿ ಉಗ್ರ ಕೃತ್ಯಗಳನ್ನು ಎಸಗುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.
ತನಿಖೆಯ ಹೊಣೆ ಎನ್‌ಐಎಗೆ
ಈ ನಡುವೆ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ತನಿಖೆಯ ಹೊಣೆಯನ್ನು ಕೇಂದ್ರ ಗೃಹಸಚಿವಾಲಯ ಎನ್‌ಐಎ ಹೆಗಲಿಗೆ ವಹಿಸಿದೆ. ಈ ದಾಳಿಯ ತನಿಖೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಿದ್ದು, ಪ್ರಕರಣ ದಾಖಲಿಸಿಕೊಂಡು ಅಧಿಕೃತವಾಗಿ ತನಿಖೆ ಶುರುಮಾಡಲಿದೆ ಎಂದು ವರದಿಗಳು ತಿಳಿಸಿವೆ. ತನಿಖೆಗೆ ನಿಯೋಜಿಲ್ಪಟ್ಟ ಎನ್‌ಐಎ ತಂಡ ಈಗಾಗಲೇ ಪಹಲ್ಗಾಮ್ ತಲುಪಿದೆ, ದಾಳಿ ನಡೆದ ಸ್ಥಳವನ್ನು ಪರಿಶೀಲಿಸುತ್ತಿದೆ. ಜೊತೆಗೆ ತನಿಖಾ ಏಜೆನ್ಸಿಯ ವಿಧಿವಿಜ್ಞಾನ ಪ್ರಯೋಗಾಲಯ ತಂಡವು ಸ್ಥಳದಲ್ಲಿದ್ದು ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ನಿರತವಾಗಿದೆ. ಮತ್ತೊಂದೆಡೆ ಸ್ಥಳೀಯ ಪೊಲೀಸರಿಂದ ಪ್ರಕರಣದ ಡೈರಿ, ಎಫ್‌ಐಆರ್ ಮತ್ತು ಈ ವಿಷಯಕ್ಕೆ ಸಂಬಂಧಿಸಿದ ಇತರ ಪ್ರಮುಖ ದಾಖಲೆಗಳನ್ನು ಸುಪರ್ದಿಗೆ ಪಡೆದುಕೊಳ್ಳಲು ಎನ್‌ಐಎ ಮುಂದಾಗಿದೆ.