550ಕ್ಕೂ ಅಧಿಕ ಬಾಂಗ್ಲಾದೇಶಿಯರ ಬಂಧನ; ಗಡಿಪಾರು ಮಾಡಲು ಕ್ರಮ
ಹೊಸದಿಲ್ಲಿ: ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಪಾಕಿಸ್ಥಾನಿ ಪ್ರಜೆಗಳಿಗೆ ದೇಶಬಿಟ್ಟು ಹೋಗಲು ಹೇಳಿದ ಬಳಿಕ ಈಗ ಬಾಂಗ್ಲಾದೇಶದ ಅಕ್ರಮ ಪ್ರಜೆಗಳಿಗೆ ಗೇಟ್‌ಪಾಸ್ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶ ಪ್ರಜೆಗಳನ್ನು ಗುರುತಿಸುವ ಕಾರ್ಯಾಚರಣೆ ಪ್ರಾರಂಭಿಸಲಾಗಿದ್ದು, ಭಾರತದಿಂದ ಹೊರಗೆ ಕಳುಹಿಸಲು ಸಿದ್ಧತೆಗಳನ್ನು ನಡೆಸಿದೆ. ರಾಜ್ಯಾದ್ಯಂತ ನಡೆದ ಬೃಹತ್ ಕಾರ್ಯಾಚರಣೆಯಲ್ಲಿ, ನಕಲಿ ದಾಖಲೆಗಳೊಂದಿಗೆ ಭಾರತದಲ್ಲಿ ವಾಸಿಸುತ್ತಿರುವ 550ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಅಹಮದಾಬಾದ್ ಮತ್ತು ಸೂರತ್‌ನಲ್ಲಿ ಬಂಧಿಸಲಾಗಿದೆ.
ಪೊಲೀಸರು ಅವರ ವಿಚಾರಣೆ ನಡೆಸುತ್ತಿದ್ದು, ಎಲ್ಲ ಪ್ರಕ್ರಿಯೆಗಳು ನಡೆದ ನಂತರ ಅವರನ್ನು ಗಡಿಪಾರು ಮಾಡುವುದಾಗಿ ಗುಜರಾತ್ ಪೊಲೀಸರು ಹೇಳಿದ್ದಾರೆ. ಬಂಧನವಾಗಿರುವ ಎಲ್ಲ ಪ್ರಜೆಗಳು ಪ್ರಮುಖ ದಾಖಲೆಗಳು ಇಲ್ಲದೆ ಅಥವಾ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭಾರತದಲ್ಲಿ ವಾಸವಾಗಿದ್ದಾರೆ ಎಂದು ಹೇಳಲಾಗಿದೆ. ಶುಕ್ರವಾರ ರಾತ್ರಿಯಿಂದೀಚೆಬೆ ನಡೆಸಿದ ಕೂಂಬಿಂಗ್ ಕಾರ್ಯಾಚರಣೆಯಲ್ಲಿ 500ಕ್ಕೂ ಹೆಚ್ಚು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಯಿತು. ಅವರು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ ನಕಲಿ ದಾಖಲೆಗಳೊಂದಿಗೆ ಸೂರತ್‌ನಲ್ಲಿ ವಾಸಿಸುತ್ತಿದ್ದರು. ತನಿಖೆಯ ನಂತರ ಅವರನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗುತ್ತದೆ ಎಂದು ಉಪ ಪೊಲೀಸ್ ಆಯುಕ್ತ ರಾಜ್‌ದೀಪ್ ಸಿಂಗ್ ನಕುಮ್ ಹೇಳಿದರು.
ಗೃಹ ಸಚಿವರು, ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ಮಹಾನಿರ್ದೇಶಕರ ಆದೇಶಗಳನ್ನು ಅನುಸರಿಸಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಹಮದಾಬಾದ್‌ನ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಶರದ್ ಸಿಂಘಾಲ್ ಹೇಳಿದ್ದಾರೆ. ಅಕ್ರಮ ವಲಸಿಗರನ್ನು ಬಂಧಿಸಬೇಕು ಎಂದು ಗೃಹ ಸಚಿವ, ಸಿಪಿ ಮತ್ತು ಡಿಜಿಪಿ ನಮಗೆ ನಿರ್ದೇಶನ ನೀಡಿದ್ದರು. ಏಪ್ರಿಲ್ 2024ರಿಂದ ಇಲ್ಲಿಯವರೆಗೆ ಅಪರಾಧ ವಿಭಾಗವು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದೆ. 127 ಅಕ್ರಮ ಬಾಂಗ್ಲಾದೇಶಿಗಳನ್ನು ಬಂಧಿಸಲಾಗಿದೆ ಮತ್ತು 77 ಜನರನ್ನು ಗಡೀಪಾರು ಮಾಡಲಾಗಿದೆ ಎಂದು ಹೇಳಿದ್ದಾರೆ.