ಮೋದಿಯವರೇ ದಯವಿಟ್ಟು ಪಾಕಿಸ್ಥಾನವನ್ನು ವಶಪಡಿಸಿಕೊಂಡು ನಮ್ಮನ್ನು ಸಾಲದ ಬಲೆಯಿಂದ ಪಾರು ಮಾಡಿ…

ಸಿಂಧೂ ನದಿ ಜಲ ಒಪ್ಪಂದ ರದ್ದಾದ ಬಳಿಕ ತಮ್ಮ ಸರಕಾರದ ಕಾಲೆಳೆದ ಪಾಕಿಸ್ಥಾನಿಯರು

ಇಸ್ಲಾಮಾಬಾದ್‌: ನಾವು ಇನ್ನು ಸ್ನಾನಕ್ಕೂ ಭಾರತದ ಬಳಿ ನೀರಿಗಾಗಿ ಅಂಗಲಾಚಬೇಕಾಬಹುದು, ಮೋದಿಯವರೇ ಆದಷ್ಟು ಬೇಗ ದಾಳಿ ಮಾಡಿ ಪಾಕಿಸ್ಥಾನವನ್ನು ವಶಪಡಿಸಿಕೊಳ್ಳಿ. ಹೀಗಾದರೆ ಕನಿಷ್ಠ ಪಾಕಿಸ್ಥಾನ ಪ್ರಪಂಚದ ಅರ್ಧಕ್ಕೂ ಹೆಚ್ಚು ದೇಶಗಳಿಗೆ ಸಾಲ ಮರು ಪಾವತಿ ಮಾಡುವುದರಿಂದಲಾದರೂ ಬಚಾವಾಗಬಹದು… ಇದು ಪಾಕಿಸ್ಥಾನದ ಜನರು ಭಾರತದ ಪ್ರತಿಕಾರದ ಕ್ರಮಗಳ ಬಳಿಕ ತಮ್ಮ ದೇಶವನ್ನು ಟ್ರೋಲ್‌ ಮಾಡಿಕೊಂಡ ಪರಿ.

ಪಹಲ್ಗಾಂವ್‌ ದಾಳಿಗೆ ಪ್ರತಿಕಾರವಾಗಿ ಐತಿಹಾಸಿಕ ಸಿಂಧೂ ಜಲ ಒಪ್ಪಂದವನ್ನು ಕೇಂದ್ರ ಸರಕಾರ ಒಂದೇಟಿಗೆ ರದ್ದು ಮಾಡಿದೆ. ಈ ನಿರ್ಧಾರದಿಂದ ಈಗಾಗಲೇ ಪಾಕಿಸ್ಥಾನ ತತ್ತರಿಸಿದ್ದು, ಭಾರತದ ಕ್ರಮವನ್ನು ನೋಡಿ ಪಾಕಿಸ್ಥಾನದ ನಾಗರಿಕರು ತಮ್ಮನ್ನು ತಾವೇ ಅಪಹಾಸ್ಯ ಮಾಡಿಕೊಳ್ಳುತ್ತಿದ್ದಾರೆ, ತಮ್ಮ ಸರಕಾರದ ಬಗ್ಗೆಯೇ ಟ್ರೋಲ್ ಮಾಡಿಕೊಂಡಿದ್ದಾರೆ. ಪಾಕಿಸ್ಥಾನದ ನೀರಿನ ಕೊರತೆಯಿಂದ ಹಿಡಿದು ವಿದ್ಯುತ್ ಕಡಿತದವರೆಗೆ ಭಾರತದ ಕ್ರಮಗಳಿಂದಾಗಿ ತಾವು ಎದುರಿಸಬೇಕಾಗಬಹುದಾದ ಹಲವಾರು ಪರಿಣಾಮಗಳನ್ನು ಪಾಕಿಸ್ಥಾನಿಗಳು ಊಹಿಸಿಕೊಂಡು ತಮ್ಮ ಸರಕಾರದ ಕಾಲೆಳೆದಿದ್ದಾರೆ.







https://screenapp.io/app/#/shared/8P4BcrrHNx























 
 

ಪಾಕಿಸ್ಥಾನಿಗಳು ಈಗ ಸ್ನಾನಕ್ಕೂ ಸಹ ಭಾರತದಿಂದ ನೀರು ಕೇಳಬೇಕಾಗುತ್ತದೆ ಎಂದು ಸೂಚಿಸುವ ಮೀಮ್ ಅನ್ನು ಒಬ್ಬ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ವ್ಯಕ್ತಿಯೊಬ್ಬ ಸಾಬೂನು ಹಚ್ಚಿಕೊಂಡು ಸ್ನಾನ ಮಾಡುತ್ತಿರುವಾಗಲೇ ನೀರು ಕೊಡಿ ಎಂದು ಕೇಳುವ ಚಿತ್ರವನ್ನು ಹಾಕಿಕೊಂಡಿದ್ದಾರೆ. ಇನ್ನೊಬ್ಬರು ಪಾಕ್ ಸರಕಾರ ಹಲವಾರು ರಾಷ್ಟ್ರಗಳಿಗೆ ಸಾಲ ಮರುಪಾವತಿಸಬೇಕಾಗಿರುವುದರಿಂದ ಭಾರತವು ನಮ್ಮ ಮೇಲೆ ದಾಳಿ ಮಾಡಿ ಈ ಸಾಲದಿಂದಾದರೂ ದೇಶವನ್ನು ಬಚಾವ್‌ ಮಾಡಿ ಎಂದು ಟ್ರೋಲ್ ಮಾಡಿಕೊಂಡಿದ್ದಾರೆ. ಭಾರತದ ಯಾವ ಕಠಿಣ ಕ್ರಮಗಳಿಗೂ ನಾವು ಹೆದರುವುದಿಲ್ಲ, ಯಾಕೆಂದರೆ ಅವೆಲ್ಲವನ್ನೂ ನಮ್ಮ ಸರಕಾರದಿಂದಲೇ ನಾವು ಅನುಭವಿಸುತ್ತಿದ್ದೇವೆ ಎಂದು ಇನ್ನೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು ಪ್ರಪಂಚದ ಅರ್ಧದಷ್ಟು ದೇಶಗಳಿಗೆ ಸಾಲ ಪಾವತಿಸಬೇಕಾಗಿದೆ, ಆದ್ದರಿಂದ ಭಾರತದಿಂದ ಯಾರೂ ನಮ್ಮ ಮೇಲೆ ದಾಳಿ ಮಾಡಲು ಬಿಡಬಾರದು. ಎಲ್ಲರೂ ನಿದ್ರೆಗೆ ಜಾರಿಕೊಳ್ಳಿ ಎಂದು ಎಕ್ಸ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬರು ಹಾಸ್ಯಮಯವಾಗಿ, ಪಾಕಿಸ್ಥಾನಿ ಸರಕಾರ ಪಾಕಿಸ್ಥಾನವನ್ನು ಭಾರತ ವಶಪಡಿಸಿಕೊಳ್ಳಬೇಕೆಂದು ಬಯಸುತ್ತದೆ. ಇದರಿಂದ ಅವರು ಜನರಿಗೆ ಹಣವನ್ನು ಖರ್ಚು ಮಾಡಲು ಮತ್ತು ಪ್ರಪಂಚದಿಂದ ಸಾಲ ಮನ್ನಾ ಕೇಳಲು ಚಿಂತಿಸಬೇಕಾಗಿಲ್ಲ ಎಂದು ಮೀಮ್‌ನಲ್ಲಿ ಲೇವಡಿ ಮಾಡಿದ್ದಾರೆ.

ದೇಶದ ವಿದ್ಯುತ್‌ ಪೂರೈಕೆಯ ದಯನೀಯ ಸ್ಥಿತಿಯ ಬಗ್ಗೆ ಟ್ರೋಲ್‌ ಮಾಡಿರುವ ಇನ್ನೊಬ್ಬರು ದಾಳಿ ಮಾಡುವುದಾದರೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯೊಳಗೆ ಮಾಡಿ ಮುಗಿಸಿ ಬಳಿಕ ನಮ್ಮಲ್ಲಿ ಕರೆಂಟ್‌ ಇರುವುದಿಲ್ಲ ಎಂದಿದ್ದಾರೆ. ಇನ್ನೊಬ್ಬರು ಭಾರತ ಸಿಂಧೂ ನದಿ ನೀರು ಕೊಟ್ಟರೂ ಕೊಡದಿದ್ದರೂ ನಮಗೇನೂ ವ್ಯತ್ಯಾಸವಾಗುವುದಿಲ್ಲ. ನಮಗೆ ಹಸಿವು, ಕತ್ತಲೆ, ಬಡತನ ಇವೆಲ್ಲ ಅಭ್ಯಾಸ ಆಗಿಹೋಗಿದೆ ಎಂದು ತನ್ನ ದೇಶದ ಕಡುಕಷ್ಟದ ಸ್ಥಿತಿಗೆ ಕೈಗನ್ನಡಿ ಹಿಡಿದಿದ್ದಾರೆ. ಇನ್ನೊಬ್ಬ ಕಿಲಾಡಿ ಪಾಕಿಸ್ಥಾನದ ದಯನೀಯ ಸ್ಥಿತಿಯನ್ನು ಪರಿಗಣಿಸಿ ಭಾರತ-ಪಾಕ್‌ ಯುದ್ಧವನ್ನು ದುಬೈಯಲ್ಲಿ ಇಟ್ಟುಕೊಳ್ಳವುದು ಒಳ್ಳೆಯದು ಎಂದು ಸಲಹೆ ಮಾಡಿದ್ದಾರೆ.

ತಕ್ಷಣವಲ್ಲದಿದ್ದರೂ ಭಾರತ ಸಿಂಧೂ ನದಿ ನೀರನ್ನು ಬಿಡದಿದ್ದರೆ ಪಾಕಿಸ್ಥಾನದ ಕೃಷಿ ಮತ್ತು ಇಂಧನ ವಲಯಗಳ ಮೇಲೆ ವ್ಯಾಪಕ ಪರಿಣಾಮಗಳನ್ನು ಬೀರಬಹುದು. ಏಕೆಂದರೆ ಪಾಕಿಸ್ಥಾನದ ಜೀವನಾಡಿಯಾದ ಸಿಂಧೂ ನದಿ ಅದರ ಕೃಷಿ ಭೂಮಿಯ ಶೇ.80 ಭಾಗಕ್ಕೆ ನೀರು ಒದಗಿಸುತ್ತದೆ. ಅದರ ಜಲವಿದ್ಯುತ್ ಉತ್ಪಾದನೆಯ ಮೂರನೇ ಒಂದು ಭಾಗ ಸಿಂಧೂ ಜಲಾನಯನ ಪ್ರದೇಶದ ನೀರನ್ನು ಅವಲಂಬಿಸಿದೆ.

1 thought on “ಮೋದಿಯವರೇ ದಯವಿಟ್ಟು ಪಾಕಿಸ್ಥಾನವನ್ನು ವಶಪಡಿಸಿಕೊಂಡು ನಮ್ಮನ್ನು ಸಾಲದ ಬಲೆಯಿಂದ ಪಾರು ಮಾಡಿ…”

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top