ರಾಷ್ಟ್ರಪತಿ ದ್ರೌಪದಿ ಮುರ್ಮು, ಡೊನಾಲ್ಡ್ ಟ್ರಂಪ್ ಸಹಿತ ಗಣ್ಯರು ಭಾಗಿ
ವ್ಯಾಟಿಕನ್ ಸಿಟಿ: ಕಳೆದ 21ರಂದು ನಿಧನರಾದ ಕ್ರೈಸ್ತರ ಪರಮೋಚ್ಚಗುರು ಪೋಪ್ ಫ್ರಾನ್ಸಿಸ್ (88) ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಸೇಂಟ್ ಪೀಟರ್ಸ್ ಸ್ಕ್ವಯರ್ ಪ್ರಾಂತ್ಯದ ಸಂತ ಮರಿಯಾ ಮಗೊಯ್ರ್‌ನಲ್ಲಿ ಶನಿವಾರ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲಿಯೇ ತಮ್ಮ ಅಂತ್ಯಕ್ರಿಯೆ ನಡೆಯಬೇಕು ಎಂಬುದು ಪೋಪ್ ಅವರ ಅಂತಿಮ ಇಚ್ಛೆಯಾಗಿತ್ತು. ಹಾಗಾಗಿ, ಅಲ್ಲಿಯೇ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ವ್ಯಾಟಿಕನ್ ಸಿಟಿ ತಿಳಿಸಿದೆ.
ಪೋಪ್ ಅವರ ಪಾರ್ಥಿವ ಶರೀರವನ್ನು ಸೇಂಟ್ ಪೀಟರ್ಸ್ ಬ್ರಸಿಲಿಕಾದಲ್ಲಿ ಇಡಲಾಗಿದೆ. ಅವರ ಪಾರ್ಥಿವ ಶರೀರವನ್ನು ತೆರೆದ ಕ್ಯಾಸ್ಕೆಟ್‌ನಲ್ಲಿ ಇರಿಸಲಾಗಿದ್ದು ಅದಕ್ಕೆ ಕೆಂಪುಬಣ್ಣದ ಬಟ್ಟೆಗಳನ್ನು ಹೊದಿಸಲಾಗಿದೆ. ಪೋಪ್ ಅವರ ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿರುವ ವಿಶ್ವದ ಅನೇಕ ಗಣ್ಯರಿಗಾಗಿ ಅಲ್ಲಿ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ
ಪೋಪ್ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ದ್ರೌಪದಿ ಮುರ್ಮು ಶುಕ್ರವಾರವೇ ವ್ಯಾಟಿಕನ್ ಸಿಟಿ ಹೋಗಿದ್ದಾರೆ. ಮುರ್ಮು ಜತೆಗೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಿಣ್ ರಿಜಿಜು ನೇತೃತ್ವದ ನಿಯೋಗ ತೆರಳಿದೆ. ಎರಡು ದಿನಗಳ ವ್ಯಾಟಿಕನ್ ಸಿಟಿ ಭೇಟಿಯಲ್ಲಿ ಮುರ್ಮು ಭಾರತದ ಜನತೆಯ ಪರವಾಗಿ ಪೋಪ್ ಫ್ರಾನ್ಸಿಸ್ ಅವರಿಗೆ ಸೇಂಟ್ ಪೀಟರ್ಸ್ ಸ್ಕ್ವೆಯರ್‌ನಲ್ಲಿ ಅಂತಿಮ ನಮನ ಸಲ್ಲಿಸಲಿದ್ದಾರೆ. ನ್ಯುಮೋನಿಯಾ ಹಾಗೂ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಪೋಪ್ ಫ್ರಾನ್ಸಿಸ್ ಅವರು ಏಪ್ರಿಲ್ 21ರಂದು ವ್ಯಾಟಿಕನ್ ಸಿಟಿಯ ಕಾಸಾ ಸಾಂಟಾ ಮಾರ್ಟಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು. ಅಂತ್ಯಕ್ರಿಯೆಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನೆಸ್ಕಿ ಕೂಡ ಭಾಗವಹಿಸಲಿದ್ದಾರೆ.
ಅಂತ್ಯಕ್ರಿಯೆಯ ಸಮಯ ಯಾವಾಗ?
ಅಂತ್ಯಕ್ರಿಯೆಯು ರೋಮ್‌ನ ಸ್ಥಳೀಯ ಕಾಲಮಾನ ಬೆಳಗ್ಗೆ 10 ಗಂಟೆಗೆ ಶುರುವಾಗುತ್ತದೆ. ಭಾರತೀಯ ಕಾಲಮಾನ ಏ.27ರಂದು ಮಧ್ಯಾಹ್ನ 1.30ರ ಸುಮಾರಿಗೆ ಶುರುವಾಗುತ್ತದೆ. ಅಂತ್ಯಕ್ರಿಯೆಯಲ್ಲಿ ನೇರವಾಗಿ ಭಾಗಿಯಾಗದವರಿಗೆ ಆನ್‌ಲೈನ್ ಮೂಲಕ ನೇರಪ್ರಸಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಿಬಿಎಸ್, ಸಿಎನ್ಎನ್, ಎಬಿಸಿ ಮುಂತಾದ ನ್ಯೂಸ್ ಚಾನೆಲ್‌ಗಳಲ್ಲಿ ನೇರ ಪ್ರಸಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ನ್ಯೂಯಾರ್ಕ್ ಟೈಮ್ಸ್‌ನ ಯುಟ್ಯೂಬ್ ಚಾನೆಲ್, ಡಿಸ್ನಿ ಪ್ಲಸ್, ಹುಲು ಹಾಗೂ ವ್ಯಾಟಿಕನ್ ನ್ಯೂಸ್ ಚಾನೆಲ್ (ಯುಟ್ಯೂಬ್ ಚಾನೆಲ್) ನೇರವಾಗಿ ಅಂತ್ಯಕ್ರಿಯೆ ಪ್ರಕ್ರಿಯೆಯನ್ನು ವೀಕ್ಷಿಸಬಹುದು.