ಗುರುವಾರ ರಾತ್ರಿಯಿಡೀ ಎಲ್‌ಒಸಿಯಲ್ಲಿ ಭಾರಿ ಗುಂಡಿನ ಚಕಮಕಿ
ನವದೆಹಲಿ : ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ನರಮೇಧ ಮಾಡಿದ ಮೂರು ದಿನಗಳ ಬಳಿಕ ಪಾಕಿಸ್ಥಾನ ಗಡಿಯಾಚೆಗಿನಿಂದ ಗುಂಡಿನ ದಾಳಿ ಪ್ರಾರಂಭಿಸಿದ್ದು, ಇದಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಗಡಿ ನಿಯಂತ್ರಣ ರೇಖೆಯಾಚೆಯಿಂದ ರಾತ್ರಿಯಿಡೀ ಶೆಲ್ ಮತ್ತು ಮೋರ್ಟರ್ ದಾಳಿಯಾಗಿದೆ. ಇದು ಅಸ್ವಾಭಾವಿಕ ಬೆಳವಣಿಗೆಯಾಗಿದ್ದು, ಪಾಕಿಸ್ಥಾನ ಕಾಲು ಕೆದರಿ ಯುದ್ಧಕ್ಕೆ ಬರುವ ಲಕ್ಷಣದಂತೆ ಕಾಣಿಸುತ್ತಿದೆ ಎಂದು ಭದ್ರತಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ಥಾನಿ ಸೈನಿಕರು ಶೆಲ್ ಮತ್ತು ಮೋರ್ಟರ್‌ಗಳಿಂದ ದಾಳಿ ನಡೆಸಿದ್ದು, ಭಾರತ ಇದನ್ನು ಸಮರ್ಥವಾಗಿ ಎದುರಿಸಿ ಉತ್ತರ ನೀಡಿದೆ. ನಮ್ಮ ಕಡೆ ಯಾವುದೇ ಗಾಯ ಅಥವಾ ಹಾನಿ ಸಂಭವಿಸಿಲ್ಲ ಎಂದು ಭದ್ರತಾ ಪಡೆ ಮೂಲಗಳು ತಿಳಿಸಿವೆ.
ಪಹಲ್ಗಾಮ್‌ನಲ್ಲಿ ಪಾಕಿಸ್ಥಾನಿ ಉಗ್ರರು ಏ.22ರಂದು ಹಿಂದೂಗಳ ನರಮೇಧ ನಡೆಸಿದ ಬಳಿಕ ಉಭಯ ದೇಶಗಳ ನಡುವಿನ ಪರಿಸ್ಥಿತಿ ಉದ್ವಿಗ್ನಗೊಂಡಿರುವ ಸಂದರ್ಭದಲ್ಲೇ ಪಾಕಿಸ್ಥಾನ ಗಡಿಯಲ್ಲಿ ಗುಂಡಿನ ದಾಳಿ ಪ್ರಾರಂಭಿಸಿರುವುದು ಯುದ್ಧಕ್ಕೆ ಪ್ರಚೋದನೆ ಎಂದು ಪರಿಗಣಿಸಲಾಗಿದೆ.