ಮುಡಿಪುವಿನಿಂದ ಮಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದ ಘಟನೆ
ಮಂಗಳೂರು : ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ನಿರ್ವಾಹಕನನ್ನು ನೌಕರಿಯಿಂದಲೇ ವಜಾ ಮಾಡಲಾಗಿದೆ. ಗುತ್ತಿಗೆ ಆಧಾರದಲ್ಲಿ ಕಂಡಕ್ಟರ್ ನೇಮಕಾತಿ ಪಡೆದಿದ್ದ ಆರೋಪಿ ಬಾಗಲಕೋಟೆಯ ಮೂಲದ ಪ್ರದೀಪ್ ಕಾಶಪ್ಪ ನಾಯ್ಕರ್ (35)ನನ್ನು ವಜಾಗೊಳಿಸಲು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದ್ದಾರೆ.
ಸರಕಾರಿ ಬಸ್‌ಗಳಲ್ಲಿ ಪ್ರತಿಯೊಬ್ಬ ಮಹಿಳೆಯೂ ಸುರಕ್ಷಿತವಾಗಿ ಪ್ರಯಾಣಿಸಬೇಕು. ಬಸ್‌ನ ಸಿಬ್ಬಂದಿಯೇ ದುರ್ವರ್ತನೆ ತೋರಿಸಿದರೆ ಅದು ಜನರಿಗೆ ತೀರಾ ಕೆಟ್ಟ ಸಂದೇಶ ನೀಡಿದಂತಾಗುತ್ತದೆ. ಇಂಥ ಕೃತ್ಯವನ್ನು ಸರಕಾರ ಸಹಿಸುವುದಿಲ್ಲ. ಹೀಗಾಗಿ ನಿರ್ವಾಹಕನ್ನು ಕೂಡಲೇ ನೌಕರಿಯಿಂದ ವಜಾ ಮಾಡಲು ಸೂಚಿಸಿದ್ದೇನೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಮುಡಿಪುವಿನಿಂದ ಮಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಿರ್ವಾಹಕ ಕಾಶಪ್ಪ ನಾಯ್ಕರ್ ಸೀಟಿನಲ್ಲಿ ಕುಳಿತು ನಿದ್ರಿಸುತ್ತಿದ್ದ ಯುವತಿಯ ಜೊತೆಗೆ ಅನುಚಿತವಾಗಿ ವರ್ತಿಸಿದ್ದ. ಲೈಂಗಿಕ ಕಿರುಕುಳ ನೀಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಕೊಣಾಜೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಯುವತಿ ಕುಳಿತಿದ್ದ ಸೀಟಿನ ಪಕ್ಕ ನಿಂತುಕೊಂಡಿದ್ದ ಕಾಶಪ್ಪ ನಾಯ್ಕರ್ ಎದೆ ಮೇಲೆ ಕೈಹಾಕಿ ಕಿರುಕುಳ ನೀಡಿದ್ದು ವೀಡಿಯೊದಲ್ಲಿ ಸೆರೆಯಾಗಿದೆ. ಗಾಢ ನಿದ್ದೆಯಲ್ಲಿದ್ದ ಯುವತಿಯ ಗಮನಕ್ಕೆ ಈ ವಿಚಾರ ಬಂದಿರಲಿಲ್ಲ. ಆದರೆ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕನೊಬ್ಬರು ನಿರ್ವಾಹಕನಿಗೆ ಗೊತ್ತಾಗದಂತೆ ಇದನ್ನು ವೀಡಿಯೊ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಈ ವೀಡಿಯೊ ವೈರಲ್ ಆದ ಬಳಿಕ ಪೊಲೀಸರು ನಿರ್ವಾಹಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಘಟನೆ ದೃಢವಾದ ಬಳಿಕ ಅವನನ್ನು ಬಂಧಿಸಿದ್ದು, ಬಳಿಕ ಇದು ಸಾರಿಗೆ ಇಲಾಖೆಯ ಗಮನಕ್ಕೆ ಬಂದಿತ್ತು.