ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಡಾ.ಮಾಣಿಕ್‌ ಸಹಾ ಪ್ರಮಾಣ ವಚನ ಸ್ವೀಕಾರ

ಅಗರ್ತಲಾ: ಸತತ ಎರಡನೇ ಅವಧಿಗೆ ತ್ರಿಪುರಾದ ಮುಖ್ಯಮಂತ್ರಿಯಾಗಿ ಡಾ ಮಾಣಿಕ್ ಸಹಾ ಇಂದು ಪ್ರಮಾಣವಚನ ಸ್ವೀಕರಿಸಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಡಾ ಮಾಣಿಕ್ ಸಹಾ ಅವರಿಗೆ ಅಗರ್ತಲಾದ ವಿವೇಕಾನಂದ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ನಡೆಯಿತು. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಮಂಗಳವಾರವೇ ರಾಜ್ಯಕ್ಕೆ ಆಗಮಿಸಿದ್ದಾರೆ.

ಮಾಣಿಕ್ ಸಹಾ 2016ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಅವರು ಮಾರ್ಚ್ 2022 ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿ, ಬಿಪ್ಲಬ್ ದೇಬ್ ಬದಲಿಗೆ ಡಾ. ಮಾಣಿಕ್ ಸಹಾ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಬಿಜೆಪಿಯಲ್ಲಿ ತಳಮಟ್ಟದಲ್ಲಿ ಕೆಲಸ ಮಾಡುತ್ತಿದ್ದ ಸಹಾ 2020ರಲ್ಲಿ ರಾಜ್ಯದಲ್ಲಿ ಪಕ್ಷದ ಮುಖ್ಯಸ್ಥರಾಗಿದ್ದರು. ಅವರು ಮುಖ್ಯಮಂತ್ರಿಯಾಗುವ ಮೊದಲು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಟೌನ್ ಬರ್ಡೋವಾಲಿ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾದರು. ಈ ವಿಧಾನಸಭಾ ಚುನಾವಣೆಯಲ್ಲಿಯೂ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.ರಾಜ್ಯದಲ್ಲಿ ಹೊಸದಾಗಿ ಚುನಾಯಿತರಾದ ಬಿಜೆಪಿ ಶಾಸಕರು ಸೋಮವಾರ ಶಾಸಕಾಂಗ ಪಕ್ಷದ ನಾಯಕನಾಗಿ ಸಹಾ ಹೆಸರನ್ನು ಸರ್ವಾನುಮತದಿಂದ ಅಂಗೀಕರಿಸಿದ ಬಳಿಕ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಡಾ.ಸಹಾ ಅವರೊಂದಿಗೆ ಶಾಸಕರು ಕೂಡ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಇತ್ತೀಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 60ರಲ್ಲಿ 32 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ತಿಪ್ರಾ ಮೋಥಾ 13 ಸ್ಥಾನಗಳನ್ನು ಪಡೆಯುವ ಮೂಲಕ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡ, ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್, ಬಿಜೆಪಿಯ ಬಿಪ್ಲಬ್ ದೇಬ್ ಮತ್ತು ಸಿಕ್ಕಿಂ ಮುಖ್ಯಮಂತ್ರಿ ಪಿಎಸ್ ತಮಾಂಗ್ ಕೂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂದಿನ ಸರ್ಕಾರದಿಂದ ನಾಲ್ವರು ಹೊಸ ಸಚಿವರನ್ನು ಉಳಿಸಿಕೊಳ್ಳಲಾಗಿದ್ದು, ರತನ್ ಲಾಲ್ ನಾಥ್, ಪ್ರಣಜಿತ್ ಸಿಂಗ್ ರಾಯ್, ಶಾಂತಾ ಚಕ್ಮಾ ಮತ್ತು ಸುಶಾಂತ ಚೌಧರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಂತೆಯೇ ಬಿಜೆಪಿ ತನ್ನ ಶ್ರೇಣಿಯೊಳಗೆ ಮೂರು ಹೊಸ ಮಂತ್ರಿಗಳನ್ನು ಸೇರ್ಪಡೆಗೊಳಿಸಿದ್ದು, ಬಿಪ್ಲಬ್ ದೇಬ್ ಅವರ ನಿಕಟವರ್ತಿ ಟಿಂಕು ರಾಯ್, ಬಿಜೆಪಿಯ ಪರಿಶಿಷ್ಟ ಪಂಗಡಗಳ ಮೋರ್ಚಾದ ಮುಖ್ಯಸ್ಥ ಬಿಕಾಶ್ ದೆಬ್ಬರ್ಮಾ ಮತ್ತು ಸುಧಾಂಶು ದಾಸ್ ಕೂಡ ಪ್ರಮಾಣ ವಚನ ಸ್ವೀಕಿಸಿದರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top