ಕಾಶ್ಮೀರದಲ್ಲಿ ಭದ್ರತಾ ಲೋಪವಾಗಿದೆ ಎಂದು ಒಪ್ಪಿಕೊಂಡ ಸರಕಾರ
ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧದ ಹಿನ್ನೆಲೆಯಲ್ಲಿ ಉಗ್ರರನ್ನು ಮಟ್ಟ ಹಾಕಲು ಸರಕಾರ ಕೈಗೊಳ್ಳುವ ಯಾವುದೇ ಕ್ರಮವನ್ನು ಬೆಂಬಲಿಸುವುದಾಗಿ ವಿಪಕ್ಷಗಳು ಹೇಳಿವೆ. ಸಂಸತ್ ಭವನದಲ್ಲಿ ನಿನ್ನೆ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಎಲ್ಲ ಪ್ರಮುಖ ವಿಪಕ್ಷಗಳು ಉಗ್ರರನ್ನು ಮಟ್ಟಹಾಕಲೇ ಬೇಕು ಎಂದು ಪ್ರತಿಪಾದಿಸಿವೆ. ಸಭೆಯಲ್ಲಿ ಕೆಲ ಮಹತ್ವದ ಅಂಶಗಳನ್ನು ಚರ್ಚಿಸಿ ಉಗ್ರರ ಕೃತ್ಯವನ್ನು ಒಕ್ಕೂರಲಿನಿಂದ ಖಂಡಿಸಲಾಗಿದೆ. ಉಗ್ರರನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡರೂ ತಮ್ಮ ಬೆಂಬಲವಿದೆ ಎಂದು ವಿರೋಧ ಪಕ್ಷಗಳ ನಾಯಕರು ತಿಳಿಸಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ರಾಜಕೀಯ ಪಕ್ಷಗಳು ಇದನ್ನು ಪಹಲ್ಗಾಮ್ ದಾಳಿಯನ್ನ ಏಕರೂಪವಾಗಿ ಖಂಡಿಸಿವೆ. ಉಗ್ರರರನ್ನು ಮಟ್ಟಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡರೂ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದಿರುವ ಹತ್ಯಾಕಾಂಡವನ್ನು ಯಾರೂ ಮರೆಯುವ ಹಾಗಿಲ್ಲ. ಕಾಶ್ಮೀರದ ಇತಿಹಾಸದಲ್ಲಿ ಅದೊಂದು ಕಪ್ಪು ಚುಕ್ಕೆಯಾಗಲಿದೆ. ಉಗ್ರವಾದವನ್ನು ಬೇರು ಸಹಿತ ಕಿತ್ತು ಹಾಕಬೇಕಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳಲೇಬೇಕು. ಈ ವಿಚಾರದಲ್ಲಿ ನಾವೆಲ್ಲರೂ ಪಕ್ಷಾತೀತವಾಗಿ ಕೇಂದ್ರಕ್ಕೆ ಬೆಂಬಲ ನೀಡುತ್ತೇವೆ ಎಂದು ಹೇಳಿದರು.
ಇನ್ನೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಪುನಃ ಸ್ಥಾಪಿಸಬೇಕೆಂದು ನಾವು ಬಯಸುತ್ತೇವೆ. ಏ.25ರಂದು ರಾಹುಲ್ ಗಾಂಧಿ ಕಾಶ್ಮೀರದ ಅನಂತನಾಗ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಉಗ್ರರ ದಾಳಿಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಸರ್ಕಾರದ ಪರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದರೆ, ವಿಪಕ್ಷಗಳ ನಾಯಕರಲ್ಲಿ ಪ್ರಧಾನವಾಗಿ ಲೋಕಸಭೆಯ ವಿರೋಧ ಪಕ್ಷಗಳ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿಪಕ್ಷಗಳ ನಾಯಕ ಮಲ್ಲಿಕಾರ್ಜುನ ಖರ್ಗೆ, ಆಮ್ ಆದ್ಮಿ ಪಾರ್ಟಿಯ ಸಂಜಯ್ ಸಿಂಗ್, ತೃಣಮೂಲ ಕಾಂಗ್ರೆಸ್‌ನ ಸುದೀಪ್ ಬಂಡೋಪಾಧ್ಯಾಯ ಸೇರಿದಂತೆ ಹಲವಾರು ನಾಯಕರು ಭಾಗವಹಿಸಿದ್ದರು.
ಭದ್ರತಾ ಲೋಪ ಒಪ್ಪಿಕೊಂಡ ಸರ್ಕಾರ
ಸರ್ಕಾರ ಭದ್ರತಾ ವೈಫಲ್ಯದಿಂದಲೇ ಪಹಲ್ಗಾಮ್ ಘಟನೆ ಆಗಿರುವುದಾಗಿ ಒಪ್ಪಿಕೊಂಡಿತು. ಸಭೆಯ ನಂತರ ಮಾತನಾಡಿದ ಕಿರಣ್ ರಿಜಿಜು, ಸಭೆಯಲ್ಲಿ ಭದ್ರತಾ ಲೋಪವಾಗಿರುವ ಬಗ್ಗೆ ವಿಪಕ್ಷಗಳು ಗಮನ ಸೆಳೆದವು. ಸರ್ಕಾರ ಕೂಡ ಅದನ್ನು ಒಪ್ಪುತ್ತದೆ. ಭವಿಷ್ಯದಲ್ಲಿ ಇಂಥ ಲೋಪಗಳು ಆಗದಂತೆ ಎಚ್ಚರಿಕೆ ವಹಿಸುವುದಾಗಿ ಸಭೆಯಲ್ಲಿ ವಿಪಕ್ಷಗಳ ನಾಯಕರಿಗೆ ನಾವು ಮನವರಿಕೆ ಮಾಡಿದೆವು ಎಂದು ತಿಳಿಸಿದ್ದಾರೆ.
ಸಿಂಧೂ ನದಿ ಒಪ್ಪಂದದ ಬಗ್ಗೆ ಹೇಳಿದ್ದೇನು?
ಸರ್ವಪಕ್ಷ ಸಭೆಯಲ್ಲಿ ಸಿಂಧೂ ನದಿ ನೀರು ಒಪ್ಪಂದವನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸುವ ವಿಷಯದ ಕುರಿತು ಮಾತನಾಡಿದ ಅಸಾದುದ್ದೀನ್ ಓವೈಸಿ, ನೀರನ್ನು ಸಂಗ್ರಹಿಸಲು ಅಥವಾ ನಿಲ್ಲಿಸಲು ನಮ್ಮಲ್ಲಿ ಯಾವುದೇ ವ್ಯವಸ್ಥೆ ಇಲ್ಲ, ಹಾಗಾದರೆ ಅದನ್ನು ಸ್ಥಗಿತಗೊಳಿಸುವುದರಿಂದ ಏನು ಪ್ರಯೋಜನ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ, ಸರ್ಕಾರದ ಉದ್ದೇಶವನ್ನು ವ್ಯಕ್ತಪಡಿಸಲು ಮತ್ತು ಭಾರತ ಸರ್ಕಾರದ ಭವಿಷ್ಯದ ನಿಲುವು ಏನಾಗುತ್ತದೆ ಎಂಬುದನ್ನು ಸಂದೇಶ ನೀಡಲು ಇದನ್ನು ಮಾಡಲಾಗಿದೆ ಎಂದು ಹೇಳಿದರು.