ಪಹಲ್ಗಾಮ್‌ ದಾಳಿಯ ಮಾಸ್ಟರ್‌ಮೈಂಡ್‌ ಸೈಫುಲ್ಲಾ ಖಾಲಿದ್‌

ಭಾರತದ ಪ್ರಧಾನಿಗಿಂತಲೂ ಹೆಚ್ಚಿನ ಭದ್ರತೆ ಇದೆಯಂತೆ ಪಾಕಿಸ್ಥಾನದ ಈ ಉಗ್ರನಿಗೆ

ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸೂತ್ರಧಾರ ಸೈಫುಲ್ಲಾ ಖಾಲಿದ್‌ ಎಂಬ ಉಗ್ರ ಮುಖಂಡ ಎಂದು ತಿಳಿದುಬಂದಿದೆ. ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಅಂಗಸಂಸ್ಥೆ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್‌ಎಫ್) ಹೊತ್ತುಕೊಂಡಿದೆ. ಈ ದಾಳಿಯ ಮಾಸ್ಟರ್ ಮೈಂಡ್ ಭಯೋತ್ಪಾದಕ ಸೈಫುಲ್ಲಾ ಖಾಲಿದ್ ಎನ್ನಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಲಷ್ಕರ್ ಮತ್ತು ಟಿಆರ್‌ಎಫ್‌ನ ಭಯೋತ್ಪಾದಕ ಚಟುವಟಿಕೆಗಳ ಪ್ರಮುಖ ನಿರ್ವಾಹಕ ಈ ಸೈಫುಲ್ಲಾ ಖಾಲಿದ್‌.

ಸೈಫುಲ್ಲಾ ಖಾಲಿದ್​ನನ್ನು ಸೈಫುಲ್ಲಾ ಕಸೂರಿ ಎಂದೂ ಕರೆಯುತ್ತಾರೆ. ಈತ ಲಷ್ಕರ್ ಎ ತೊಯ್ಬಾಕ್ಕೂ ಉಪಮುಖ್ಯಸ್ಥನಾಗಿದ್ದಾನೆ, ಅಂತಾರಾಷ್ಟ್ರೀಯ ಭಯೋತ್ಪಾದಕ ಹಫೀಜ್ ಸಯೀದ್​ಗೆ ಬಹಳ ಆಪ್ತನಾಗಿದ್ದಾನೆ. ಸೈಫುಲ್ಲಾಗೆ ಐಷಾರಾಮಿ ಕಾರುಗಳೆಂದರೆ ಇಷ್ಟ, ಆತನಿಗೆ ಭಾರತದ ಪ್ರಧಾನಿಗಿಂತ ಹೆಚ್ಚಿನ ಭದ್ರತೆ ಇದೆಯಂತೆ.





























 
 

ಸೈಫುಲ್ಲಾ ಖಾಲಿದ್ ಪಾಕಿಸ್ಥಾನದಲ್ಲಿ ಎಷ್ಟು ಪ್ರಭಾವ ಹೊಂದಿದ್ದಾನೆಂದರೆ ಪಾಕಿಸ್ಥಾನಿ ಸೇನಾ ಅಧಿಕಾರಿಗಳು ಆತನ ಮೇಲೆ ಹೂಮಳೆ ಸುರಿಸಿ ಬರಮಾಡಿಕೊಳ್ಳುತ್ತಾರೆ. ಆತ ಪಾಕಿಸ್ಥಾನದಲ್ಲಿ ವಿಐಪಿಯಂತೆ ಓಡಾಡುತ್ತಾನೆ. ಸೈಫುಲ್ಲಾ ಎರಡು ತಿಂಗಳ ಹಿಂದೆ ಪಾಕಿಸ್ಥಾನ ಆಕ್ರಮಿತ ಪಂಜಾಬ್​ನ ಕಂಗನ್​ಪುರಕ್ಕೆ ಬಂದಿದ್ದ.

ಪಾಕಿಸ್ಥಾನಿ ಸೇನೆಯ ಕರ್ನಲ್ ಜಾಹಿದ್ ಜರೀನ್ ಖಟ್ಟಕ್ ಒಂದು ಕಾರ್ಯಕ್ರಮ ಆಯೋಜಿಸಿದ್ದ. ಅಲ್ಲಿ ಖಾಲಿದ್ ಭಾರತೀಯ ಸೇನೆ ಮತ್ತು ಭಾರತದ ಜನರ ವಿರುದ್ಧ ಉಗ್ರ ಭಾಷಣ ಮಾಡಿದ್ದ. ಖೈಬರ್ ಪಖ್ತುಂಖ್ವಾದಲ್ಲಿ ನಡೆದ ಸಭೆಯಲ್ಲೂ ಸೈಫುಲ್ಲಾ ದ್ವೇಷದ ವಿಷ ಕಾರಿ 2026ರ ಫೆಬ್ರವರಿ ಹೊತ್ತಿಗೆ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ತನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದ. ನಮ್ಮ ಮುಜಾಹಿದ್ದೀನ್‌ಗಳು ಮುಂದಿನ ದಿನಗಳಲ್ಲಿ ದಾಳಿಯನ್ನು ತೀವ್ರಗೊಳಿಸುತ್ತಾರೆ. ಫೆಬ್ರವರಿ 2, 2026ರ ವೇಳೆಗೆ ಕಾಶ್ಮೀರ ಸ್ವತಂತ್ರವಾಗುವ ಭರವಸೆ ಇದೆ ಎಂದಿದ್ದ.

ಲಷ್ಕರ್‌ನ ರಾಜಕೀಯ ವಿಭಾಗಗಳಾದ ಪಿಎಂಎಂಎಲ್ ಮತ್ತು ಎಸ್‌ಎಂಎಲ್ ಅಬೋಟಾಬಾದ್ ಅರಣ್ಯಗಳಲ್ಲಿ ಭಯೋತ್ಪಾದಕ ಶಿಬಿರವನ್ನು ಆಯೋಜಿಸಿದ್ದವು. ಕಾಶ್ಮೀರದಲ್ಲಿ 370ನೇ ವಿಧಿಯನ್ನು ತೆಗೆದುಹಾಕಿದ ನಂತರ ಐಎಸ್ಐ ಟಿಆರ್‌ಎಫ್ ಅನ್ನು ರಚಿಸಿತು. ಟಿಆರ್‌ಎಫ್ ಲಷ್ಕರೆಯ ಹಣಕಾಸು ಮೂಲಕ ನಡೆಸಲಾಗುತ್ತದೆ. ಗುಪ್ತಚರ ಸಂಸ್ಥೆ ‘ರಾ’ ಮತ್ತು ಭಾರತೀಯ ಸೇನೆಯ ಗುಪ್ತಚರ ಸಂಸ್ಥೆಗಳ ಪ್ರಕಾರ ಸೈಫುಲ್ಲಾ ಖಾಲಿದ್ ಪಾಕಿಸ್ಥಾನಿ ಸೇನೆಯ ವಿಶೇಷ ವ್ಯಕ್ತಿ ಮಾತ್ರವಲ್ಲದೆ, ಭಾರತದ ನಂಬರ್ ಒನ್ ಶತ್ರು ಹಫೀಜ್ ಸಯೀದ್‌ನ ಬಲಗೈ ಬಂಟ ಕೂಡ.

ಹಫೀಜ್ ಸಯೀದ್ ಮತ್ತು ಸೈಫುಲ್ಲಾ ಖಾಲಿದ್ ನಡುವಿನ ಸ್ನೇಹ ತುಂಬಾ ಗಾಢವಾದದ್ದು. ಪಹಲ್ಗಾಮ್ ದಾಳಿಯ ನಂತರವೇ ಸೈಫುಲ್ಲಾ ಖಾಲಿದ್ ಭಾರತೀಯ ಏಜೆನ್ಸಿಗಳ ಗಮನಕ್ಕೆ ಬಂದಿದ್ದಾನೆ. ಮುಂಚೆಯೂ ಅವನು ಕಾಶ್ಮೀರ ಕಣಿವೆಯಲ್ಲಿ ಅನೇಕ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top