ಬೆಂಗಳೂರಿನ ಭರತ್‌ಭೂಷಣ್, ಶಿವಮೊಗ್ಗದ ಮಂಜುನಾಥ್ ಹತ್ಯೆ ಅತಿ ದಾರುಣ
ಬೆಂಗಳೂರು: ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣ ಪಹಲ್ಗಾಂವ್‌ನ ಬೈಸನ್ ಎಂಬ ಕಣಿವೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಉಗ್ರರ ಭೀಕರ ದಾಳಿಯಲ್ಲಿ ಕರ್ನಾಟಕದ ಇಬ್ಬರು ವ್ಯಕ್ತಿಗಳು ತಮ್ಮ ಹೆಂಡತಿ ಮತ್ತು ಮಕ್ಕಳ ಎದುರೇ ಗುಂಡೇಟು ತಿಂದು ಮರಣವನ್ನಪ್ಪಿದ್ದಾರೆ. ಉಗ್ರರು ಪ್ರವಾಸಿಗರ ಪೈಕಿ ಪುರುಷರನ್ನು ಪ್ರತ್ಯೇಕಿಸಿ ಅವರ ಧರ್ಮ ಕೇಳಿ, ಕುರಾನ್‌ನ ವಾಕ್ಯಗಳನ್ನು ಪಠಿಸಲು ಹೇಳಿ ಅವರು ಹಿಂದುಗಳು ಎಂದು ದೃಢಪಡಿಸಿಕೊಂಡು ಕುಟುಂಬದವರ ಎದುರೇ ಗುಂಡಿಕ್ಕಿದ್ದಾರೆ. ಬೆಂಗಳೂರು ಮೂಲದ ಟೆಕ್ಕಿ ಭರತ್ ಭೂಷಣ್ ಮತ್ತು ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಉಗ್ರರ ಅಟ್ಟಹಾಸದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಭರತ್ ಭೂಷಣ್ ಕಳೆದ ಶುಕ್ರವಾರ ಬೆಂಗಳೂರಿನಿಂದ, ಪತ್ನಿ, ಹಾಗೂ ಮೂರು ವರ್ಷದ ಮಗನನ್ನು ಕರೆದುಕೊಂಡು ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ನಾಲ್ಕೈದು ದಿನಕ್ಕೆ ಪ್ರವಾಸಕ್ಕೆ ತೆರಳಿದ್ದ ಕುಟುಂಬ ಗುರುವಾರ ಮಧ್ಯಾಹ್ನ ಬೆಂಗಳೂರಿಗೆ ವಾಪಸ್ ಆಗಬೇಕಿತ್ತು. ಆದರೆ ಮಂಗಳವಾರ ನಡೆದ ಉಗ್ರರ ಗುಂಡಿನ ದಾಳಿಯಿಂದ ಭರತ್ ಭೂಷಣ್ ಪ್ರಾಣಪಕ್ಷಿ ಹಾರಿಹೋಗಿದೆ. ದಾಳಿಯಾದ ಸ್ಥಳದಲ್ಲೇ ಇದ್ದ ಭರತ್‌ಭೂಷಣ್ ಕುಟುಂಬ, ತಪ್ಪಿಸಿಕೊಳ್ಳಲು ಓಡಿಹೋಗಿದೆ. ಅಲ್ಲೇ ಇದ್ದ ಮರವೊಂದರ ಬಳಿ ಮಗು ಜೊತೆ ಅವಿತು ಕುಳಿತಿದ್ದ ಭರತ್ ಭೂಷಣ್‌ಗೆ ಉಗ್ರರು ನೇರ ಶೂಟ್ ಮಾಡಿದ್ದಾರೆ. ಬುಲೆಟ್ ನೇರ ಭೂಷಣ್ ತಲೆಗೆ ಬಿದ್ದಿದ್ದು, ಸ್ಥಳದಲ್ಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಭರತ್ ಎಂಟು ವರ್ಷದ ಹಿಂದೆ ಮತ್ತಿಕೆರೆ ಮೂಲದ ಯುವತಿಯನ್ನು ಮದುವೆಯಾಗಿದ್ದರು. ಟೆಕ್ಕಿಯಾಗಿದ್ದ ಭರತ್ ಇತ್ತೀಚಿಗೆ ಕೆಲಸ ಬಿಟ್ಟು ಬಿಸಿನೆಸ್ ಆರಂಭಿಸುವ ಚಿಂತನೆಯಲ್ಲಿದ್ದರು. ಕೆಲಸ ಬಿಟ್ಟು ಬಿಡುವು ಇದ್ದ ಕಾರಣ ಮಗುವಿಗೆ ಕಾಶ್ಮೀರ ತೋರಿಸಬೇಕೆಂಬ ಕಾರಣಕ್ಕೆ ಪ್ರವಾಸ ಕೈಗೊಂಡಿದ್ದರು.

ಶಿವಮೊಗ್ಗದ ಮಂಜುನಾಥ್ ಪುತ್ರ ದ್ವಿತೀಯ ಪಿಯುಸಿಯಲ್ಲಿ ಶೇ.97 ಅಂಕ ಪಡೆದಿದ್ದ ಹಿನ್ನೆಲೆಯಲ್ಲಿ ಈ ಸಂಭ್ರಮಾಚರಣೆಗೆಂದು ಪತ್ನಿ, ಮಗನ ಜೊತೆ ಕಾಶ್ಮೀರಕ್ಕೆ ತೆರಳಿದ್ದ ವೇಳೆ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.
ಮೃತ ಮಂಜುನಾಥ್ ತಾಯಿ, ಪತ್ನಿ, ಪುತ್ರನೊಂದಿಗೆ ನಗರದ ವಿಜಯನಗರ ಬಡಾವಣೆಯಲ್ಲಿ ವಾಸವಾಗಿದ್ದರು. ಐದು ದಿನಗಳ ಹಿಂದೆ ಮಂಜುನಾಥ್ ಕುಟುಂಬದೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಮೊದಲು ರಾಜಸ್ಥಾನ ಪ್ರವಾಸಕ್ಕೆ ಯೋಜಿಸಿದ್ದ ಮಂಜುನಾಥ್ ಬಳಿಕ ಪ್ಲ್ಯಾನ್ ಬದಲಾಯಿಸಿ ಕಾಶ್ಮೀರಕ್ಕೆ ತೆರಳಿದ್ದರು.
ದೆಹಲಿಯ ಇಂಡಿಯನ್ ಟೂರಿಸ್ಟ್ ಸಂಸ್ಥೆಯಿಂದ ಟೂರ್ ಆಯೋಜನೆಗೊಂಡಿತ್ತು. ಮಂಜುನಾಥ್ ಆನ್‌ಲೈನ್‌ನಲ್ಲಿ ಟೂರ್ ಆಯೋಜಿಸಿಕೊಂಡಿದ್ದರು. ಉಗ್ರರು ಮಂಜುನಾಥ್ ಅವರ ಧರ್ಮ ಕೇಳಿ ಹತ್ಯೆ ಮಾಡಿದ್ದಾರೆ. ಜೊತೆಗಿದ್ದ ಪತ್ನಿ ಪಲ್ಲವಿ ಹಾಗೂ ಪುತ್ರನನ್ನು ಮೂವರು ಭಯೋತ್ಪಾದಕರು ಬಿಟ್ಟು ಕಳುಹಿಸಿದ್ದು, ‘ಜಾವೋ ಮೋದಿ ಕೋ ಬೋಲೋ’ ಎಂದು ಹೇಳಿ ಸ್ಥಳದಿಂದ ತೆರಳಿದ್ದಾರೆ.
ಮಂಜುನಾಥ್ ತಾಯಿ ಸುಮತಿಗೆ ಇನ್ನೂ ಕೂಡ ಮಗನ ಹತ್ಯೆಯಾಗಿರುವ ವಿಚಾರ ತಿಳಿದಿಲ್ಲ. ಮಂಜುನಾಥ್ ಉಗ್ರರಿಂದ ಹತ್ಯೆಯಾಗಿದ್ದಾನೆಂದು ಕುಟುಂಬಸ್ಥರು ತಿಳಿಸಿಲ್ಲ. ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದಷ್ಟೇ ಕುಟುಂಬಸ್ಥರು ತಾಯಿಗೆ ತಿಳಿಸಿದ್ದಾರೆ.