ಜನಿವಾರ ತೆಗೆಸಿದ ಘಟನೆ ಕೋಮುವಾದದ ಅತಿರೇಕ : ಸಂಸದ ಕ್ಯಾ.ಬ್ರಿಜೇಶ್‌ ಚೌಟ

ಹಿಂದೂಗಳ ಧಾರ್ಮಿಕ ಶ್ರದ್ಧೆಯ ಮೇಲಾದ ಆಕ್ರಮಣ ಎಂದು ಆಕ್ರೋಶ

ಮಂಗಳೂರು : ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣವನ್ನು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ತೀವ್ರವಾಗಿ ಖಂಡಿಸಿದ್ದು, ಕರ್ನಾಟಕದ ಸರ್ವ ಜನಾಂಗದ ಶಾಂತಿ ತೋಟವನ್ನು ಸರ್ವನಾಶ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ದ್ವೇಷಿಸುತ್ತಿದ್ದು, ವಿದ್ಯಾರ್ಥಿಯ ಭವಿಷ್ಯದ ಹಿತಾಸಕ್ತಿಯನ್ನು ಕಡೆಗಣಿಸಿ ಹಾಗೂ ಹಿಂದೂ ಸಂಪ್ರದಾಯದ ಆಚಾರ ವಿಚಾರಗಳನ್ನು ಅಪಚಾರವೆಸಗಿದೆ ಎಂದು ಹೇಳಿದ್ದಾರೆ.

ವರ್ಷಪೂರ್ತಿ ಕಷ್ಟಪಟ್ಟು ಅಧ್ಯಯನ ಮಾಡಿ ಒಳ್ಳೆಯ ಭವಿಷ್ಯಕ್ಕಾಗಿ ಸಿಇಟಿ ಸಿದ್ಧತೆ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿಗಳ ಯಜ್ಞೋಪವೀತ ತುಂಡರಿಸಿರುವುದು ಹಿಂದೂಗಳ ಧಾರ್ಮಿಕ ಶ್ರದ್ದೆಯ ಮೇಲೆ ನಡೆದ ಆಕ್ರಮಣವಾಗಿದೆ. ಕೈಯಲ್ಲಿ ಕಟ್ಟಿಕೊಂಡಿದ್ದ ಕಾಶೀದಾರ ಮತ್ತು ಗಾಯತ್ರಿ ದೀಕ್ಷೆ ಪಡೆದ ಜನಿವಾರವನ್ನು ಬಲವಂತವಾಗಿ ತೆಗೆಸಿರುವುದು ಸನಾತನ ಹಿಂದೂ ಧರ್ಮದ ಭಾಗವಾದ ಬ್ರಾಹ್ಮಣ ಸಮಾಜಕ್ಕೆ ಮಾಡಿದ ಅವಮಾನ. ಸಿದ್ದರಾಮಯ್ಯ ಸರ್ಕಾರ ಪರೀಕ್ಷೆಯ ತಪಾಸಣೆ ನೆಪದಲ್ಲಿ ಮಾಂಗಲ್ಯವನ್ನು ತೆಗೆಯಲು, ಜನಿವಾರ ತುಂಡರಿಸಲು ಪ್ರಚೋದಿಸಿರುವುದು ಅಕ್ಷಮ್ಯ. ಉದ್ದೇಶಪೂರ್ವಕವಾಗಿ ಮಾಡಲಾದ ಈ ಕೃತ್ಯ ಕಾಂಗ್ರೆಸ್ ಸರ್ಕಾರದ ಹೀನ ಮನಸ್ಥಿತಿಯ ಮುಖವಾಡವನ್ನು ಬಯಲು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.



















































 
 

ಯಜ್ಞೋಪವೀತ ಕೇವಲ ಒಂದು ದಾರವಲ್ಲ; ಅದು ಜ್ಞಾನದ ಸಂಕೇತ, ಸಂಯಮದ ಪ್ರತೀಕ. ಇದು ವಟುವಿನ ಬದುಕಿಗೆ ಒಂದು ಮಹತ್ವದ ತಿರುವು ನೀಡುವ ಸಂಸ್ಕಾರ. ಇಂತಹ ಪವಿತ್ರ ಸಂಸ್ಕಾರವನ್ನು ಕಡೆಗಣಿಸಿ, ಅದನ್ನು ತೆಗೆದುಹಾಕುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿಯ ಭಾವನೆಯನ್ನು ಘಾಸಿಗೊಳಿಸುವುದರ ಜತೆಗೆ ಸಮಸ್ತ ಹಿಂದೂಗಳ ಧಾರ್ಮಿಕ ಭಾವನೆಗಳಿಗೂ ತೀವ್ರ ನೋವುಂಟು ಮಾಡಿದ್ದಾರೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಮಾಜದಲ್ಲಿ ದ್ವೇಷದ ಬೀಜವನ್ನು ಬಿತ್ತುತ್ತಿದ್ದು, ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ, ಜಾತಿ ಗಣತಿಯಲ್ಲಿಯೂ ತಾರತಮ್ಯ, ಜನಿವಾರದಂತಹ ಕೃತ್ಯಗಳಿಂದ ಒಂದು ವರ್ಗದ ಜನರನ್ನು ಓಲೈಸುತ್ತಿರುವುದು ಕೋಮುವಾದದ ಅತಿರೇಕದ ನಡೆಗಳಾಗಿವೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಕ್ಷಣ ರಾಜ್ಯದ ಜನತೆಯ ಕ್ಷಮೆಯಾಚಿಸಿ ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top