ಮಂಗಳವಾರ ಬೆಳಗ್ಗೆ 10 ಗ್ರಾಂಗೆ 1,01,135 ರೂ. ದರ
ನವದೆಹಲಿ: ಅಕ್ಷಯ ತೃತೀಯಕ್ಕೆ ಕೆಲವೇ ದಿನಗಳು ಬಾಕಿ ಇರುವ ಹೊತ್ತಲ್ಲೇ ಚಿನ್ನದ ಬೆಲೆ ಒಂದು ಲಕ್ಷ ರೂ. ದಾಟಿ ಚಿನಿವಾರ ಮಾರುಕಟ್ಟೆಯಲ್ಲಿ ಸಾರ್ವತ್ರಿಕ ದಾಖಲೆ ಸೃಷ್ಟಿಸಿದೆ. ಅಮೆರಿಕದ ಸುಂಕ ನೀತಿ ಮತ್ತು ಚೀನದ ಜೊತೆಗಿನ ವ್ಯಾಪಾರ ಸಮರ ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಲು ಕಾರಣ ಎನ್ನಲಾಗಿದೆ.
ಮಂಗಳವಾರ ಬೆಳಗ್ಗೆ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ. ದಾಟಿದೆ. 24 ಕ್ಯಾರಟ್ ಚಿನ್ನದ ಬೆಲೆ ಮಂಗಳವಾರ 1 ಗ್ರಾಂಗೆ 10,135 ರೂ. ತಲುಪಿದ್ದು, 10 ಗ್ರಾಂಗೆ 1,01,135 ರೂ.ಆಗಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಚಿನ್ನದ ಬೆಲೆ 1 ಲಕ್ಷ ರೂ. ದಾಟಿದೆ. 22 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂಗೆ 9,290 ರೂ.ಗೆ ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 92,900 ರೂ. ತಲುಪಿದೆ.
ಭಾರತೀಯರ ಪಾಲಿಗೆ ಅಕ್ಷಯ ತೃತೀಯ ಚಿನ್ನ ಖರೀದಿಯ ಪವಿತ್ರ ದಿನವಾಗಿದ್ದು, ಈ ಸಮಯದಲ್ಲೇ ಚಿನ್ನದ ಬೆಲೆ ಗಗನಕ್ಕೇರಿರುವುದು ಬಹಳ ನಿರಾಸೆ ಮೂಡಿಸಿದೆ. ಚಿನ್ನದಂಗಡಿಗಳ ಮಾಲೀಕರಿಗೂ ಚಿನ್ನ ಸಿಕ್ಕಾಪಟ್ಟೆ ದುಬಾರಿಯಾಗಿರುವುದು ಚಿಂತೆ ಮೂಡಿಸಿದೆ. ಈಗ ಮದುವೆ ಸೀಸನ್ ಕೂಡ ಆಗಿರುವುದರಿಂದ ಚಿನ್ನದ ಬೆಲೆ ಏರಿಕೆ ಭಾರತೀಯರ ಬದುಕಿನ ಮೇಲೆ ನಾನಾ ರೀತಿಯ ಪರಿಣಾಮಗಳನ್ನು ಬೀರುತ್ತಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ದೇಶಗಳ ಮೇಲೆ ಪ್ರತಿಸುಂಕ ವಿಧಿಸಿರುವುದು ಚಿನ್ನದ ಬೆಲೆ ದಾಖಲೆಯ ಏರಿಕೆಗೆ ಕಾರಣ ಎನ್ನಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ. ಹೀಗಾಗಿ ಸುರಕ್ಷಿತ ಹೂಡಿಕೆಗಾಗಿ ಹೂಡಿಕೆದಾರರು ಚಿನ್ನದತ್ತ ಆಕರ್ಷಿತರಾಗಿದ್ದಾರೆ.