ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಿದವರಿಗೆ ಶುಲ್ಕ ಹೆಚ್ಚಳದ ಜೊತೆ ಇನ್ನೊಂದು ಬರೆ
ಬೆಂಗಳೂರು : ಶಾಲಾ ಶುಲ್ಕದ ಬೆನ್ನಿಗೆ ಪೋಷಕರಿಗೆ ಪಠ್ಯಪುಸ್ತಕದ ಬೆಲೆಯೇರಿಕೆಯ ಬರೆ ಬಿದ್ದಿದೆ. ಪಠ್ಯಪುಸ್ತಕಗಳ ಬೆಲೆ ಸರಾಸರಿಯಾಗಿ ಶೇ. 10ರಷ್ಟು ಏರಿಕೆಯಾಗಿದೆ. ಈ ಏರಿಕೆಗೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.
ಕರ್ನಾಟಕ ಪಠ್ಯಪುಸ್ತಕ ಸಂಘ 2025-2026ನೇ ಸಾಲಿನ ಪಠ್ಯಪುಸ್ತಕ ಬೆಲೆಯನ್ನು ಶೇ.10ರಷ್ಟು ಏರಿಕೆ ಮಾಡಿದೆ. ಈಗಾಗಲೇ ಕೆಲವು ಪಠ್ಯಪುಸ್ತಕಗಳ ಬೆಲೆ ಶೇ.100ರಷ್ಟು ಹೆಚ್ಚಾಗಿದ್ದು, ಈ ವರ್ಷವೂ ಕರ್ನಾಟಕ ಪಠ್ಯ ಪುಸ್ತಕ ಸಂಘ ಪಠ್ಯಪುಸ್ತಕಗಳ ದರ ಏರಿಕೆ ಮಾಡಿದೆ.
ಸರಕಾರಿ ಶಾಲಾ ಮಕ್ಕಳಿಗೆ ಸರಕಾರವೇ ಉಚಿತವಾಗಿ ಪಠ್ಯಪುಸ್ತಕ, ನೋಟ್ ಪುಸ್ತಕ ಕೊಡುತ್ತಿದೆ. ಆದರೆ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿದ ಪೋಷಕರು ಪಠ್ಯಪುಸ್ತಕ ಬೆಲೆ ಏರಿಕೆ ಹೊರೆಯನ್ನು ಹೊರಬೇಕಾಗಿದೆ. ಈ ಸಲ ಖಾಸಗಿ ಶಾಲೆಗಳು ಫೀಸ್ ಕೂಡ ಹೆಚ್ಚಳ ಮಾಡಿರುವುದರಿಂದ ಪೋಷಕರಿಗೆ ಎರಡೆರಡು ಹೊರೆ ಬಿದ್ದಂತಾಗಿದೆ.
ಖಾಸಗಿ ಶಾಲೆಗಳಿಂದ ಡಿಸೆಂಬರ್ ತಿಂಗಳಲ್ಲಿ ಇಂಡೆಂಟ್ ಪಡೆದಿದ್ದ ಪಠ್ಯಪುಸ್ತಕ ಸಂಘ, ಮುಂಗಡ ಶೇ.10ರಷ್ಟು ಹಣವನ್ನು ಆನ್‌ಲೈನ್ ಮೂಲಕ ಪಾವತಿಸಿಕೊಂಡಿತ್ತು. ಈಗ ಖಾಸಗಿ ಶಾಲೆಗೆ ಇಂಡೆಂಟ್ ಪಡೆದಿದ್ದಕ್ಕಿಂತ ಶೇ.10ರಷ್ಟು ಹೆಚ್ಚು ಕೇಳುತ್ತಿದೆ. ಇದರ ನೇರ ಪರಿಣಾಮ ಪೋಷಕರಿಗೆ ತಟ್ಟಲಿದೆ. ಖಾಸಗಿ ಶಾಲೆಗಳು ಈ ಬೆಲೆ ಏರಿಕೆಯ ಹೊರೆಯನ್ನು ಪೋಷಕರ ಮೇಲೆ ಹಾಕಲು ಮುಂದಾಗಿವೆ.
ಎಲ್ಲದರ ಬೆಲೆ ಏರಿಕೆಯಾಗಿರುವುದರಿಂದ ಜನರಿಗೆ ತೊಂದರೆ ಆಗುತ್ತಿದೆ ಎಂದು ಸಾಕಷ್ಟು ಬಾರಿ ನಾವು ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಪಠ್ಯಪುಸ್ತಕ ದರವನ್ನು ಅನಿವಾರ್ಯವಾಗಿ ಏರಿಕೆ ಮಾಡಬೇಕಿದೆ. ಈ ಏರಿಕೆಯ ಹೊರೆಯನ್ನು ನಾವು ಪೋಷಕರ ಮೇಲೆ ಹಾಕಬೇಕಿದೆ ಎಂದು ಖಾಸಗಿ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ.