ಉಪ್ಪಿನಂಗಡಿ: ಕಾಲೇಜು ಬಿಟ್ಟು ಮನೆಯಲ್ಲಿದ್ದ ಅಪ್ರಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿಯಾಗಿಸಿದ ಘಟನೆ ಉಪ್ಪಿನಂಗಡಿಯ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಸಂಭವಿಸಿದ್ದು, ಸಂಬಂಧಿಕ ಯುವಕನ ವಿರುದ್ಧ ಉಪ್ಪಿನಂಗಡಿ ಪೊಲೀಸರು ಪೋಕ್ಸೊ ಕೇಸ್ ದಾಖಲಿಸಿ ಬಂಧಿಸಿದ್ದಾರೆ.
16ರ ಹರೆಯದ ಯುವತಿ ದೂರದ ಸಂಬಂಧಿಕ ರಮೇಶ ಎಂಬವನ ಮನೆಗೆ ಫೆ.10ರಂದು ಹೋಗಿದ್ದಳು. ಅಂದು ರಾತ್ರಿ ರಮೇಶ ಆಕೆಯನ್ನು ಪುಸಲಾಯಿಸಿ, ಬೆದರಿಸಿ ದೈಹಿಕ ಸಂಪರ್ಕ ಮಾಡಿದ್ದ. ನಂತರ ಮಾ.9, ಮಾ.27 ಮತ್ತು ಮಾ.28ರಂದು ಇದೇ ರೀತಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ.
ಮಾ.29ರಂದು ಸಂತ್ರಸ್ತ ಬಾಲಕಿ ಮಕ್ಕಳ ಸಹಾಯವಾಣಿ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಸಹಾಯದಿಂದ ಮಂಗಳೂರಿನ ಕಾವೂರಿನಲ್ಲಿರುವ ಬಾಲಕಿಯರ ಬಾಲಮಂದಿರಕ್ಕೆ ದಾಖಲಾಗಿದ್ದಳು. ಏ.1ರಂದು ಆಪ್ತ ಸಮಾಲೋಚಕರಿಗೆ ತನ್ನ ಮೇಲೆ ಲೈಂಗಿಕ ದೌರ್ಜನ್ಯವಾಗಿರುವ ಬಗ್ಗೆ ತಿಳಿಸಿದ್ದಾಳೆ. ಏ.2ರಂದು ಲೇಡಿಗೋಷನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿದಾಗ ಆಕೆ ಗರ್ಭಿಣಿಯಾಗಿರುವುದು ತಿಳಿದುಬಂದಿದೆ. ಆಕೆ ನೀಡಿದ ದೂರಿನ ಪ್ರಕಾರ ಆರೋಪಿ ರಮೇಶನನ್ನು ಉಪ್ಪಿನಂಗಡಿ ಪೊಲೀಸರು ಪೋಕ್ಸೊ ಕಾಯಿದೆಯಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ.